ಟಿಪ್ಪರ್ ಲಾರಿ ಡಿಕ್ಕಿ : ಕೂಲಿ ಕಾರ್ಮಿಕ ಸಾವು

Accident

12-07-2019

ಬೆಂಗಳೂರು:  ಬಾಣಸವಾಡಿಯ ಹೆಣ್ಣೂರು ಬಂಡೆ ಬಳಿ ಇಂದು ಬೆಳಿಗ್ಗೆ  ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬಿಹಾರ ಮೂಲದ ಕೂಲಿಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಹೊರಮಾವು ಅಗರದ ವಿಕಾಸ್ ಕುಮಾರ್‍ಸಾಹು (30)ಎಂದು ಮೃತಪಟ್ಟ ದುರ್ದೈವಿಯನ್ನು ಗುರುತಿಸಲಾಗಿದೆ. ಬಿಹಾರದಿಂದ ಕೂಲಿ ಅರಸಿ ಬಂದಿದ್ದ ವಿಕಾಸ್ ಕುಮಾರ್, ಅಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಮನೆಯಿಂದ ಹೆಣ್ಣೂರು ಬಂಡೆ ಮಾರ್ಗವಾಗಿ ಹೋಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ಕೆಲಸಕ್ಕೆ ಬೆಳಿಗ್ಗೆ 7.30ರ ವೇಳೆ ಹೋಗುತ್ತಿದ್ದ ವಿಕಾಸ್ ಕುಮಾರ್‍ಗೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ವಿಕಾಸ್ ಕುಮಾರ್‍ಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಬಾಣಸವಾಡಿ ಸಂಚಾರ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.

ಉದ್ಯೋಗಿ ಸಾವು

ರಾತ್ರಿ ಬೈಯಪ್ಪನಹಳ್ಳಿಯ ಮೆಟ್ರೊ ಡಿಪೋ ಬಳಿ ನಿನ್ನೆ ರಾತ್ರಿ ಈಷರ್ ಲಗೇಜ್ ವಾಹನ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ರಾಮಮೂರ್ತಿ ನಗರದ ಪೈ ಲೇಔಟ್‍ನ ಸತ್ಯಮೂರ್ತಿ (50)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ವಿಶ್ವಾಸ್‍ಕುಮಾರ್, ರಾತ್ರಿ 9.30ರ ವೇಳೆ ಕೆಲಸದ ಮೇಲೆ ಬೈಯಪ್ಪನಹಳ್ಳಿ ಮೆಟ್ರೊ ಡಿಪೋ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಲಗೇಜ್ ವಾಹನ ಡಿಕ್ಕಿ ಹೊಡೆದಿದೆ.

ಕೆಳಗೆ ಬಿದ್ದ ಸತ್ಯಮೂರ್ತಿ ಅವರ ಮೇಲೆ ವಾಹನದ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಜೀವನ್ ಭೀಮಾ ನಗರ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಜಗದೀಶ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Death Labor Banasavadi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ