ಯಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಸೂಚನೆ

Supreme Court

12-07-2019

ಕುತೂಹಲ ಕೆರಳಿಸಿರುವ 10 ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ವಿಷಯದಲ್ಲಿ ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಸುಪ್ರೀಂಕೋರ್ಟ್‍ನ ಈ ಆದೇಶದಿಂದ ಶಾಸಕರ ರಾಜೀನಾಮೆಯನ್ನು ಮಂಗಳವಾರದವರೆಗೆ ಅಂಗೀಕರಿಸುವಂತೆಯೂ ಇಲ್ಲ ಅಥವಾ ಅವರನ್ನು ಅನರ್ಹಗೊಳಿಸುವಂತೆಯೂ ಇಲ್ಲದಂತಹ ಯಥಾಸ್ಥಿತಿ ಸೃಷ್ಟಿಯಾಗಿದೆ. ಜುಲೈ 16ರಂದು ಮಂಗಳವಾರ ಈ ಪ್ರಕರಣದ ವಿಸ್ತೃತ ವಿಚಾರಣೆ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದ್ದು, ಮುಂದಿನ ನಿರ್ಧಾರ ಭಾರೀ ಕುತೂಹಲ ಕೆರಳಿಸಿದೆ.

ಅತೃಪ್ತ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಸರ್ಕಾರದ ಪರ ವಕೀಲ ಅಭಿಷೇಕ್ ಮನೋಜ್ ಸಿಂಘ್ವಿ ನಡುವೆ ಭಾರೀ ವಾದ-ವಾಗ್ವಾದಕ್ಕೆ ಸುಪ್ರೀಂಕೋರ್ಟ್ ಇಂದು ಸಾಕ್ಷಿಯಾಯಿತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠವು ಇಂದು ಸ್ಪೀಕರ್ ರಮೇಶ್‍ಕುಮಾರ್, ಬಂಡಾಯ ಶಾಸಕರು ಹಾಗೂ ಮುಖ್ಯಮಂತ್ರಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿತು. ಮೂರು ಪಕ್ಷಗಳ ಪರ ವಕೀಲರು ಸುಪ್ರೀಂಕೋರ್ಟ್‍ನಲ್ಲಿ ತಮ್ಮ ವಾದಗಳನ್ನು ಸಮರ್ಥವಾಗಿ ಮಂಡಿಸಿ ಕಾನೂನು ಅಂಶಗಳನ್ನು ಉಲ್ಲೇಖಿಸಿ ವಾಕ್ಚಾತುರ್ಯ ಪ್ರದರ್ಶಿಸಿದರು.

ಸ್ಪೀಕರ್ ಪರವಾಗಿ ಮೊದಲು ವಾದ ಮಂಡಿಸಿದ ಅಭಿಷೇಕ್ ಮನೋಜ್ ಸಿಂಘ್ವಿ ನಿಯಮಾವಳಿಗಳ ಪ್ರಕಾರ ಸಭಾಧ್ಯಕ್ಷರ ಕೈಗೆ ರಾಜೀನಾಮೆ ಕೊಡಬೇಕು. ಅದನ್ನು ರಮೇಶ್‍ಕುಮಾರ್ ಅವರು ವಿಚಾರಣೆ ಮಾಡಬೇಕು. ಸಂವಿಧಾನದ ಪ್ರಕಾರ ಸರಿ ಇದ್ದರೆ ಮಾತ್ರ ಅವರು ರಾಜೀನಾಮೆ ಅಂಗೀಕರಿಸುತ್ತಾರೆ. ಈ ವಿಷಯದಲ್ಲಿ ಸ್ಪೀಕರ್ ಅವರಿಗೆ ಸ್ಪಷ್ಟ ವಿವೇಚನೆ ಇದೆ ಎಂದು ವಾದಿಸಿದರು.


ಸಂಬಂಧಿತ ಟ್ಯಾಗ್ಗಳು

Karnataka Crisis Supreme Court MLA Resignation Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ