ಸರ್ಕಾರದ ಮತ್ತೆರಡು ವಿಕೆಟ್ ಪತನ: ಅಳಿವಿನಂಚಿನಲ್ಲಿ ಸರ್ಕಾರ

Karnataka Government crisis

11-07-2019

ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಪತನದ ಅಂಚಿನತ್ತ ಸಾಗಿದೆ. ಈ ನಡುವೆ ನಿನ್ನೆ ಎಂ.ಟಿ.ಬಿ ನಾಗರಾಜ್, ಕೆ ಸುಧಾರಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಮೈತ್ರಿ ಸರ್ಕಾರ ಈಗಾಗಲೇ ಅಲ್ಪ ಮತಕ್ಕೆತಲುಪಿದ್ದು ಸರ್ಕಾರದ ಪತನದತ್ತ ಸಾಗಿದೆ. ಈಗಾಗಲೇ ರಾಜಿನಾಮೆ ನೀಡಿರುವ ಶಾಸಕರಿಗೆ ಖುದ್ದಾಗಿ ತಮ್ಮ ಮುಂದೆ ಹಾಜರಾಗುವಂತೆ ಪ್ರತ್ಯೇಕ ದಿನಗಳನ್ನು ಸಭಾಧ್ಯಕ್ಷರು ನಿಗದಿ ಮಾಡಿದ್ದಾರೆ. ಈ ಮಧ್ಯೆ ಸಭಾಧ್ಯಕ್ಷ ರಮೇಶ್‍ಕುಮಾರ್, ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಸಭಾಧ್ಯಕ್ಷ ಹುದ್ದೆಯ ಪರಮಾಧಿಕಾರವನ್ನು ಬಳಸಿ, ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ವಿಧಾನಸಭೆ ಅಧಿವೇಶನವನ್ನು ಕರೆಯಲಾಗಿದೆ. ಒಂದು ವೇಳೆ ಹಣಕಾಸು ಮಸೂದೆ ವಿಫಲವಾದಲ್ಲಿ ಸರ್ಕಾರ ಬಿದ್ದು ಹೋಗುತ್ತದೆ. ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲ. ಅಧ್ಯಕ್ಷ ಪೀಠದಿಂದ ತಾವು ನೀಡುವ ತೀರ್ಮಾನ ಸಂವಿಧಾನದ ನಿಯಮಾನುಸಾರವಿತ್ತು ಎಂದು ಖಾರವಾಗಿ ನುಡಿದರು.

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಸರ್ಕಾರದ ರಕ್ಷಣೆ ನನ್ನ ಜವಾಬ್ದಾರಿ ಅಲ್ಲ. ಸರ್ಕಾರ ನಡೆಸುವವರು ಅದರ ಸಂಪೂರ್ಣ ಹೊಣೆಗಾರಿಕೆ, ಉದ್ದೇಶ ಹೊಂದಿರಬೇಕು ಎಂದರು.

ಈ ಮಧ್ಯೆ, ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಹೇಳಿದ್ದ ಭಾರತೀಯ ಜನತಾ ಪಕ್ಷ ನೇರವಾಗಿ ರಾಜಿನಾಮೆ ನೀಡಿದ ಶಾಸಕರ ಬೆಂಬಲಕ್ಕೆ ನಿಲ್ಲುವುದಲ್ಲದೇ ಅವರ ಸರ್ವರಕ್ಷಣೆಗೆ ಎಲ್ಲ ತಂತ್ರಗಳನ್ನು ಅಳವಡಿಸಿಕೊಂಡಿರುವುದು ಬಹಿರಂಗಗೊಂಡಿದೆ. ಮುಂಬಯಿ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ನಡೆದುಕೊಂಡ ರೀತಿ ಗಮನಿಸಿದರೇ ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಎಲ್ಲ ಮಾರ್ಗಗಳನ್ನು ಮುಕ್ತವಾಗಿಟ್ಟುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮೂಲಗಳ ಪ್ರಕಾರ, ಈಗಾಗಲೇ ರಾಜ್ಯಪಾಲರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಈ ಕುರಿತಂತೆ ಕೇಂದ್ರದಿಂದ ಸ್ಪಷ್ಟ ನಿರ್ದೇಶನ ರವಾನಿಸುವಂತೆ ಮಾಹಿತಿ ರವಾನಿಸಿರುವುದಾಗಿ ತಿಳಿದುಬಂದಿದೆ.

ಈ ನಡುವೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ಅಲ್ಪಮತಕ್ಕಿಳಿದಿರುವ ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರಗಳಿಗೆ ಅಂಕಿತ ಹಾಕದಂತೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.


ಸಂಬಂಧಿತ ಟ್ಯಾಗ್ಗಳು

MTB Nagaraj Karnataka Government K Sudhakar Resignation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ