ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರ ದುರ್ಮರಣ

Accident

10-07-2019

ಬೆಂಗಳೂರು: ಪುಲಕೇಶಿನಗರದ ಮಾರುತಿ ಸೇವಾ ನಗರದಲ್ಲಿ ನಿನ್ನೆ ಮಧ್ಯರಾತ್ರಿ ನಿರ್ಮಾಣ ಹಂತದ ಎರಡು ಕಟ್ಟಡಗಳ ನೆಲಮಾಳಿಗೆ ಕುಸಿದು ಮಗು, ಮಹಿಳೆ ಸೇರಿ ಮೂವರು ಮೃತಪಟ್ಟು 7 ಮಂದಿ ಗಾಯಗೊಂಡಿರುವ ದಾರುಣ ಘಟನೆ ಮಾರುತಿ ಸೇವಾ ನಗರದಲ್ಲಿ ನಡೆದಿದೆ.

ಬಿಹಾರ ಮೂಲದ ಕೂಲಿ ಕಾರ್ಮಿಕರಾದ ಶಬುಕುಮಾರ್(27) ನಿರ್ಮಲ(28) ಹಾಗೂ ಅನುಷ್ಕಾ(3) ಎಂದು ಮೃತಪಟ್ಟ ದುರ್ದೈವಿಗಳನ್ನು ಗುರುತಿಸಲಾಗಿದೆ. ಗಾಯಗೊಂಡಿರುವ 7 ಮಂದಿಯಲ್ಲಿ ಉಮೇಶ್ ಕುರ್ಮಾ ಎಂಬುವರ ಸ್ಥಿತಿ ಗಂಭೀರವಾಗಿದೆ.

ಮಾರುತಿ ಸೇವಾ ನಗರದ ಎರಡನೇ ಕ್ರಾಸ್‍ನ ಥಾಮಸ್‍ನಗರದಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತುಗಳ ಎರಡು ಕಟ್ಟಡಗಳು ಮಧ್ಯರಾತ್ರಿ 2.15ರ ವೇಳೆ ದಿಢೀರ್ ಕುಸಿದು ಕಟ್ಟಡದ ನೆಲ ಮಹಡಿಯಲ್ಲಿ ನಿದ್ದೆಯಲ್ಲಿದ್ದ ಶಬುಕುಮಾರ್,ನಿರ್ಮಲ ಹಾಗೂ ಅನುಷ್ಕಾ ಸಾವನ್ನಪ್ಪಿದ್ದರೆ ಕಟ್ಟಡದಲ್ಲಿ ಸಿಲುಕಿದ್ದ 7 ಮಂದಿಯನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಉಳಿದೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅವಶೇಷಗಳಡಿ ಇನ್ನು ಇಬ್ಬರು ಸಿಲುಕಿದ್ದು ಅವರ ರಕ್ಷಣಾ ಕಾರ್ಯ ಮುಂದುವರೆದಿದೆ. ಎರಡು ಕಟ್ಟಡಗಳಲ್ಲಿ ಒಂದು ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೆ ಒಳಾಂಗಣ ವಿನ್ಯಾಸ ನಡೆಸಲಾಗುತ್ತಿತ್ತು ಮತ್ತೊಂದು ಕಟ್ಟಡದಲ್ಲಿ ಪೇಟಿಂಗ್ ಕೆಲಸ ಮಾಡಲಾಗುತ್ತಿತ್ತು ಎರಡು ಕೆಲಸದಲ್ಲಿ ತೊಡಗಿದ್ದ ಉತ್ತರ ಭಾರತದ ಮೂಲದ ಕಾರ್ಮಿಕರು ನೆಲಮಹಡಿಯಲ್ಲಿ ವಾಸವಾಗಿದ್ದರು.

ಕಟ್ಟಡ ಕುಸಿತದ ಸುದ್ದಿ ತಿಳಿದ ತಕ್ಷಣ ಆಗ್ನಿಶಾಮಕ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದು ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ ಒಳಗಿದ್ದ ಕಾರ್ಮಿಕರ ರಕ್ಷಣೆ ಕಾರ್ಯ ಕೈಗೊಂಡಿದ್ದು ಇಂದು ಮಧ್ಯಾಹ್ನದವರೆಗೆ ರಕ್ಷಣಾ ಕಾರ್ಯ ಮುಂದುವರೆದಿದೆ.

ಕಟ್ಟಡ ನಿರ್ಮಾಣದ ಜಾಗದಲ್ಲಿ ನೀರಿನಾಂಶವಿದ್ದು ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್ ಮರಳು ಬಳಸಿರುವುದು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಎರಡೂ ಕಟ್ಟಡಗಳ ಬೇಸ್‍ಮೆಂಟ್ ಕುಸಿದಿರುವ ಕಾರಣ,ಉಳಿದ ಭಾಗ ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಕೈಗೊಳ್ಳಲಾಗಿದೆ. ಸೈಟ್ 40ರಲ್ಲಿ ಹಳೆಯ ಕಟ್ಟಡ ಕೂಡ ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದ್ದು, ನೆಲಮಹಡಿ ಕುಸಿದಿದೆ. ಪುಲಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Death Accident Labor Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ