ಮುಂಬೈ ಹೋಟೆಲ್ ಮುಂದೆ ರಾಜಕೀಯ ಹೈಡ್ರಾಮಾ!

Karnataka Crisis: High drama infront of Mumbai hotel

10-07-2019

ಬೆಂಗಳೂರು: ಮುಂಬೈನ ಖಾಸಗಿ ಹೋಟೆಲ್ ಮುಂದೆ ಹೈಡ್ರಾಮಾ ನಡೆಯಿತು. ಹೋಟೆಲ್ ನಲ್ಲಿ ತಂಗಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿರುವ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಪೊಲೀಸರು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಜೊತೆ ಮುಂಬೈ ಪೊಲೀಸರು ಮಾತುಕತೆ ನಡೆಸುವ ಮೂಲಕ ಭಾರೀ ಹೈಡ್ರಾಮವೇ ನಡೆಯುತ್ತಿದೆ.

ಇದೇ ಸಂದರ್ಭದಲ್ಲಿ ಹೋಟೆಲ್ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ನನ್ನ ಸ್ನೇಹಿತರು ಈ ಹೋಟೆಲ್‍ನಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದೇನೆ ಹೊರತು ಯಾರಿಗೂ ನಾನು ಬೆದರಿಕೆ ಹಾಕಲು ಬಂದಿಲ್ಲ. ಹೋಟೆಲ್ ಒಳಗೆ ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಹೇಳಿದರು.

ನಾನು ಇಲ್ಲಿ ರೂಮ್‍ ಬುಕ್ ಮಾಡಿದ್ದೇನೆ. ನನ್ನ ಕುಟುಂಬದ ಸಹೋದರರು ಇಲ್ಲಿನ ಹೋಟೆಲ್ ರೂಮ್‍ನಲ್ಲಿ ಇದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಯಾರಿಗೂ ನಾನು ಬೆದರಿಕೆ ಹಾಕಲು ಬಂದಿಲ್ಲ. ನನ್ನ ಕುಟುಂಬದಲ್ಲಿ ಸ್ವಲ್ಪ ಬಿರುಕು ಉಂಟಾಗಿದೆ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎಂದರು

ನನ್ನ ರೂಮ್ ಕೂಡ ಇದೇ ಹೋಟೆಲ್‍ನಲ್ಲಿದೆ, ಹೀಗಾಗಿ ನಾನು ಬಂದಿದ್ದೇನೆ. ಈ ಹೋಟೆಲ್‍ನಲ್ಲಿರುವ ನಾಯಕರು ಹಾಗೂ ನಾವೆಲ್ಲರೂ ಒಟ್ಟಿಗೆ ರಾಜಕೀಯ ಮಾಡಿದ್ದೇವೆ ಎಂದು ಹೇಳಿದರು.

ಮಂಗಳವಾರ ಬಿಜೆಪಿ ನಾಯಕರು ನಮ್ಮವರನ್ನು ಭೇಟಿಯಾಗಲು ಹೋಟೆಲ್‍ಗೆ ಬಂದಿದ್ದರು ಅವರನ್ನು ಹೇಗೆ ಒಳಗೆ ಬಿಡಲಾಯಿತು, ಈಗ ನಮಗೆ ಯಾಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸದ್ಯ ರಿನೈಸೆನ್ಸ್ ಹೋಟೆಲ್ ಗೇಟ್ ಬಂದ್ ಮಾಡಲಾಗಿದೆ ಶಿವಕುಮಾರ್ ಅಲ್ಲಿ ಗೆ ಬರುತ್ತಿದ್ದಂತೆ ಪೊಲೀಸರು ಅವರನ್ನು ಒಳಗೆ ಹೋಗದಂತೆ ತಡೆದಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಚಿವರು ವಾಗ್ವಾದಕ್ಕೆ ಇಳಿದರು.

ಮತ್ತೊಂದೆಡೆ ಗೋಬ್ಯಾಕ್ ಡಿಕೆ ಶಿವಕುಮಾರ್ ಎಂದು ಅತೃಪ್ತ ನಾಯಕರ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ. ಆದರೆ ಯಾರು ಏನು ಬೇಕಾದರೂ ಮಾಡಲಿ, ಗೋ ಬ್ಯಾಕ್ ಎಂದಾದರೂ ಹೇಳಲಿ, ಗೋ ಎಸ್ ಎಂದಾದರೂ ಹೇಳಲಿ. ನಾನೂ ಈ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದೇನೆ. ಇಡೀ ದಿನಾ ಇಲ್ಲೆ ಇರುತ್ತೇನೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

D K Shivkumar MLA Mumbai Karnataka crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ