ಇಬ್ಬರು ಕುಖ್ಯಾತ ಕಳ್ಳರ ಬಂಧನ

Two arrested for theft

09-07-2019

ಬೆಂಗಳೂರು: ಅಂಗಡಿ ಕಳ್ಳತನ ಮಾಡಿ ಲೈವ್ ಬ್ಯಾಂಡ್‍ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಬಸವನಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರ್‍ಟಿ ನಗರದ ಸುಲ್ತಾನ್ ಪಾಳ್ಯದ ಮಹಮದ್ ಫೈಜಲ್ ಅಲಿಯಾಸ್ ಸೈಯ್ಯದ್ ಇಸ್ಮಾಯಿಲ್ (20) ಹಾಗೂ ಆರ್‍ಟಿ ನಗರದ ಕೆಂಪಾಪುರದ ವಿಕ್ರಂ ಕುಮಾರ್ ಅಲಿಯಾಸ್ ಉಸ್ಮಾನ್ (20) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ವಾರದ ಹಿಂದಷ್ಟೇ ಎನ್‍ಆರ್ ಕಾಲೋನಿಯಲ್ಲಿ ಮೆಡಿಕಲ್ ಸ್ಟೋರ್, ಪಾನ್ ಬೀಡಾ ಅಂಗಡಿ ಸೇರಿದಂತೆ, ಸರಣಿ ಅಂಗಡಿ ಕಳವು ಮಾಡಿ ಪರಾರಿಯಾಗಿದ್ದರು. ಬಂಧಿತರಿಂದ 40 ಸಾವಿರ ರೂ. ನಗದು, ಎರಡು ಮೊಬೈಲ್‍ಗಳು, ಸಿಗರೇಟ್ ಪ್ಯಾಕ್‍ಗಳು, ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಅವರು ತಿಳಿಸಿದ್ದಾರೆ.

ಬಂಧಿತ ವಿಕ್ರಂ ಕುಮಾರ್ ಬಿಹಾರ ಮೂಲದವನಾಗಿದ್ದು, ಹಿಂದೆ ಆರ್‍ಟಿ ನಗರ, ಕೆಪಿ ಅಗ್ರಹಾರ, ಕೋರಮಂಗಲದಲ್ಲಿ ಅಂಗಡಿ ಕಳ್ಳತನ ಮಾಡಿ ಜೈಲಿಗೆ ಹೋಗಿ ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಆರ್‍ಟಿ ನಗರದಲ್ಲಿ ಕಳೆದ ಆರು ತಿಂಗಳಿನಿಂದ ವಾಸವಾಗಿದ್ದ ಆರೋಪಿಯು ಮತ್ತೊಬ್ಬ ಬಂಧಿತ ಆರೋಪಿ ಸೈಯ್ಯದ್ ಇಸ್ಮಾಯಿಲ್ ಜೊತೆ ಸೇರಿ ಅಂಗಡಿಗಳ ಕಳ್ಳತನಕ್ಕೆ ಇಳಿದಿದ್ದರು. ರಾತ್ರಿವೇಳೆ ಇಬ್ಬರೂ ಸಂಚರಿಸುತ್ತ ಬೀಗ ಹಾಕಿದ ಅಂಗಡಿಗಳು, ಪಾನ್ ಶಾಪ್‍ಗಳ ಬೀಗ ಮುರಿದು ಕಳವು ಮಾಡಿ ಲೈವ್ ಬ್ಯಾಂಡ್ ಹೋಗಿ ಮೋಜು - ಮಸ್ತಿ ಮಾಡುತ್ತಿದ್ದರು.

ಎನ್‍ಆರ್ ಕಾಲೋನಿಯಲ್ಲಿ ಕಳೆದ ಜುಲೈ 1 ರಂದು ಮುಂಜಾನೆ ನಡೆದಿದ್ದ ಕಳವು ಪ್ರಕರಣವನ್ನು ದಾಖಲಿಸಿ ಬಸವನಗುಡಿ ಪೊಲೀಸ್ ಇನ್ಸ್‍ಪೆಕ್ಟರ್ ಕೆಂಪೇಗೌಡ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆರ್‍ಟಿ ನಗರದ ಕೆಂಪಾಪುರದ ಪಾರ್ಕ್ ಬಳಿ ಇದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Theft Bengaluru Arrest Police case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ