ಕಾಂಗ್ರೆಸ್ ತೊರೆಯುವುದಿಲ್ಲ ಎಂದ ರಾಮಲಿಂಗಾರೆಡ್ಡಿ

Ramalingareddy Statement

09-07-2019

ಬೆಂಗಳೂರು: ಕಾಂಗ್ರೆಸ್ ನ ಕೆಲವು ನಾಯಕರ ವರ್ತನೆಯಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕರು ಯಾವುದೇ ಕಾರಣಕ್ಕೂ ಪಕ್ಷ ಬಿಡಬಾರದು ಎಂದು ಹೇಳಿದ್ದಾರೆ. ನಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದೇನೆ. ಅವರಿಗೆ ಮೊದಲೇ ಕಾರಣ ಗೊತ್ತಿತ್ತು. ನಾನು ಪುನಃ ಕಾರಣವನ್ನು ತಿಳಿಸಿದ್ದೇನೆ ಎಂದರು.

ಹೈಕಮಾಂಡ್‍ನಿಂದ ಯಾರೂ ನನಗೆ ಕರೆ ಮಾಡಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮಾತ್ರ ಕರೆ ಮಾಡಿ ಮಾತನಾಡಿದ್ದಾರೆ. ರಾಜಿನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆದರೆ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಪತ್ರವನ್ನು ಹಿಂಪಡೆಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಹೇಳಿದರು.

ಸಭಾಧ್ಯಕ್ಷರು ಎಲ್ಲರನ್ನು ಕರೆದು ಮಾತನಾಡಿಸುತ್ತಾರೆ. ನನ್ನ ಒಬ್ಬನ ರಾಜೀನಾಮೆಯಿಂದ ದೋಸ್ತಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ನಾನು ಯಾರಿಗೂ ರಾಜೀನಾಮೆ ನೀಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಸೌಮ್ಯಾ ರೆಡ್ಡಿ ಅವರು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ದೆಹಲಿಗೆ ತೆರಳಿದ್ದರು. ಅಲ್ಲಿ ಸಭೆ ಇತ್ತು. ಹಾಗಾಗಿ ಅವರು ಅಲ್ಲಿ ಹೋಗಿದ್ದರು. ಅಲ್ಲಿ ಹೋಗಿದ್ದ ಕಾರಣ ನಾಯಕರು ಹಾಗೂ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಸೌಮ್ಯಾ ಅಲ್ಲಿ ಏನೂ ಮಾತನಾಡಿದ್ದಾಳೆ ಎಂಬುದು ನನಗೆ ಗೊತ್ತಿಲ್ಲ ಎಂದರು.

ನನಗೆ ವೈಯಕ್ತಿಕವಾಗಿ ಬೇಸರ ಇತ್ತು. ಹಾಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈ ಹಿಂದೆ ಸಾಕಷ್ಟು ಬಾರಿ ನನ್ನ ಬೇಸರದ ಬಗ್ಗೆ ಹೇಳಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

 


ಸಂಬಂಧಿತ ಟ್ಯಾಗ್ಗಳು

Congress Ramalingareddy Resignation Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ