ಸರ್ಕಾರವನ್ನು ರಾಜ್ಯಪಾಲರು ತಕ್ಷಣ ವಜಾಗೊಳಿಸಲಿ: ಆರ್ ಅಶೋಕ್

Karnataka Government in danger

08-07-2019

ಬೆಂಗಳೂರು: ಅಲ್ಪ ಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರವನ್ನು ರಾಜ್ಯಪಾಲರು ತಕ್ಷಣ ವಜಾಗೊಳಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಒತ್ತಾಯಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಶಾಸಕರಿಗೆ ಹಾಗೂ ಸಚಿವ ಸಂಪುಟದ ಸಚಿವರಿಗೂ ವಿಶ್ವಾಸ ಇಲ್ಲದಂತಾಗಿದೆ. ಇಂತಹ ಬೆಳವಣಿಗೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಮೇರಿಕಾದಿಂದ ರಾಜ್ಯಕ್ಕೆ ಆಗಮಿಸಿದ ಬಳಿಕ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆವು. ಶಾಸಕರು ಸಚಿವರು ರಾಜೀನಾಮೆ ನೀಡಿದ ಬಳಿಕವೂ ಮುಖ್ಯಮಂತ್ರಿಯಾಗಿ ಮುಂದುವರೆದಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಅವರು ಆಗ್ರಹಿಸಿದರು.

ಮೈತ್ರಿ ಸರ್ಕಾರದಲ್ಲಿ ಶಾಸಕರ ಮೇಲೂ ದೌರ್ಜನ್ಯ ಎಸಗುತ್ತಿದ್ದು ಇದು ಹೆಚ್ಚು ದಿನ ನಡೆಯುವುದಿಲ್ಲ. ಎಚ್ಎಎಲ್ ನಲ್ಲಿ ಶಾಸಕ ಎಚ್ ನಾಗೇಶ್ ಅವರನ್ನು ತಡೆಯುವ ಕೆಲಸ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಗೇಟ್ ನಲ್ಲಿ ಅಡ್ಡಗಟ್ಟುವುದು, ಬಲವಂತವಾಗಿ ಹಿಡಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸಾಮಾನ್ಯ ಜನರು ಕೂಡಾ ಹೀಗೆ ವರ್ತಿಸುವುದಿಲ್ಲ. ಮೊನ್ನೆ ಸಚಿವ ಡಿಕೆ ಶಿವಕುಮಾರ್ ಅವರು ಸ್ಪೀಕರ್ ಕಚೇರಿಗೆ ನುಗ್ಗಿ ಶಾಸಕರ ರಾಜೀನಾಮೆ ಪತ್ರವನ್ನು ಕಸಿದುಕೊಂಡು ಹರಿದು ಹಾಕಿದ್ದಾರೆ. ತೀವ್ರ ಭದ್ರತೆ ಇರುವ ವಿಮಾನ ನಿಲ್ದಾಣದಲ್ಲೂ ದೌರ್ಜನ್ಯ,ಗೂಂಡಾಗಿರಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

 


ಸಂಬಂಧಿತ ಟ್ಯಾಗ್ಗಳು

Congress R Ashok JDS BS Yediyurappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ