ಗಡ್ಡ ಬಿಟ್ಟುಕೊಂಡು, ಓಲೆ ಹಾಕ್ಕೊಂಡ್ರೆ ಹೀರೋನಾ?

Kannada News

10-06-2017

ಕಿವಿಯೋಲೆ ಅನ್ನೋದು ಹೆಣ್ಣುಮಕ್ಕಳ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಆಭರಣ. ಬಗೆ ಬಗೆಯ ಕಿವಿಯೋಲೆ ಧರಿಸುವುದು ಹೆಣ್ಣುಮಕ್ಕಳಿಗೆ ತುಂಬಾನೇ ಇಷ್ಟ. ಪುಟ್ಟ ಪುಟ್ಟ ಕಿವಿಯೋಲೆಯಿಂದ ಹಿಡಿದು ಭಾರವಾದ ಕಿವಿಯೋಲೆಗಳನ್ನು ಮಹಿಳೆಯರು ಹಾಕಿಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ಪುರುಷರೂ ಕೂಡಾ ಕಿವಿಯೋಲೆ ಹಾಕಿಕೊಳ್ಳೋಕೆ ಶುರುಮಾಡಿದ್ದಾರೆ.

ಹೌದು… ಇತ್ತೀಚಿಗೆ ಯುವಕರ ಕಿವಿಯಲ್ಲಿ ಓಲೆ ಅನ್ನೋದು ಕಾಮನ್ ಆಗಿಬಿಟ್ಟಿದೆ. ರಿಂಗ್ ನಂತಹ, ಸ್ಟಾರ್ ಆಕಾರದ ಅಥವಾ ಹೊಳೆಯೋ ಸ್ಟೋನ್ ಇರೋ ಓಲೆಗಳು ಯುವಕರ ಕಿವಿಯಲ್ಲಿ ರಾರಾಜಿಸುತ್ತಿರುತ್ತೆ. ಅದರಲ್ಲೂ ಸೀರಿಯಲ್ ಹೀರೋಗಳೆಂದರೆ ಒಂದು ಗಡ್ಡ ಬಿಟ್ಟಿರಬೇಕು ಜೊತೆಗೆ ಕಿವಿಗೆ ಓಲೆ ಹಾಕಿಕೊಂಡಿರಬೇಕು ಅನ್ನೋ ಹಂಗಾಗಿದೆ. ಯಾವುದೇ ಸೀರಿಯಲ್ ಹೀರೋ ನೋಡಿದ್ರೂ ಆತನ ಕಿವಿಯಲ್ಲೊಂದು ಓಲೆ ಇರುತ್ತೆ. ಅದು ಬಲಗಿವಿ ಅಥವಾ ಎಡಗಿವಿ ಯಾವುದಾದರೂ ಒಂದು ಕಿವಿಗೆ ಓಲೆ ಹಾಕಿಕೊಂಡಿರುತ್ತಾರೆ. ಬರೀ ಹೀರೋಗಳೇ ಏಕೆ ಕೆಲ ರಾಜಕಾರಣಿಗಳ ಕಿವಿಗಳಲ್ಲೂ ಈ ಓಲೆಗಳು ಕಾಣಿಸಿಕೊಳ್ಳುತ್ತಿವೆ.  ಅದೇನಿದು ಹುಡುಗರಾಗಿ ಕಿವಿಗೆ ಓಲೆನಾ ಅಂತಾ ಕೇಳಿದ್ರೆ ಇದು ಭಾರತೀಯ ಸಂಸ್ಕೃತಿ. ಜೊತೆಗೆ ಲೇಟೆಸ್ಟ್ ಫ್ಯಾಷನ್ ಅಂತಾರೆ.

ಆದರೆ ನಿಮಗೆ ಗೊತ್ತಾ… ಗಂಡಸರು ಕಿವಿಗೆ ಓಲೆ ಹಾಕಿಕೊಳ್ಳೋದು ಭಾರತೀಯ ಸಂಸ್ಕೃತಿ ಅಲ್ಲವೇ ಅಲ್ಲ. ನಮ್ಮ ಸಂಸ್ಕೃತಿಯಲ್ಲಿ ಪುರುಷರು ಕುಂಡಲ ಹಾಕಿಕೊಳ್ಳುತ್ತಾರೆ. ಪುರಾಣ ಕಥೆಗಳಲ್ಲಿ ರಾಜರು, ಕ್ಷತ್ರಿಯರು ಹಾಕಿಕೊಳ್ಳುತ್ತಿದ್ದ ಕರ್ಣಕುಂಡಲ. ಇನ್ನು ಮಹಿಳೆಯರು ಹಾಕಿಕೊಳ್ಳುವುದು ಓಲೆ. ಆದರೆ ಈ ಓಲೆಗಳನ್ನೇ ಪುರುಷರು ಹಾಕಿಕೊಂಡು ಫ್ಯಾಷನ್ ಎನ್ನುತ್ತಿರೋದು ಹಾಸ್ಯಾಸ್ಪದ ಎನ್ನುತ್ತಾರೆ ಚಿಂತಕರು.

ಗಂಡಸರು ಓಲೆ ಹಾಕಿಕೊಳ್ಳೋದು ಭಾರತೀಯ ಸಂಸ್ಕೃತಿ ಅಲ್ಲ.. ಹಾಗಿದ್ರೆ ಇದು ಪಾಶ್ಚಾತ್ಯ ಸಂಸ್ಕೃತೀನಾ? ಅದೂ ಅಲ್ಲ. ಪಾಶ್ಚಿಮಾನ್ಯ ದೇಶಗಳಲ್ಲಿ ಕಿವಿಯೋಲೆಗಳನ್ನು ಲೈಂಗಿಕ ದೃಷ್ಟಿಕೋನ ತಿಳಿಸಲು ಹಾಕಿಕೊಳ್ಳುತ್ತಾರೆ. ಆದರೆ ಅದೇನು ಚೆಂದವೋ… ನಮ್ಮಲ್ಲಿ ಮಾತ್ರ ಬಹುತೇಕ ಎಲ್ಲ ಸೀರಿಯಲ್ ಹೀರೋಗಳೂ ಕಿವಿಯೋಲೆ ಹಾಕಿಕೊಳ್ಳೋಕೆ ಆರಂಭಿಸಿದ್ದಾರೆ.

ಇನ್ನು ಅರ್ಧಂಬರ್ಧ ಗಡ್ಡ ಬಿಡೋದೂ ಈಗಿನ ಮತ್ತೊಂದು ಟ್ರೆಂಡ್. ಬಾಲಿವುಡ್, ಸ್ಯಾಂಡಲ್ ವುಡ್ ಅಷ್ಟೇ ಏಕೆ ಬಹುತೇಕ ಧಾರಾವಾಹಿಗಳಲ್ಲಿ ಹೀರೋ ಆದವರು ಗಡ್ಡ ಬಿಟ್ಟಿರುತ್ತಾರೆ. ಕೆಲವೊಬ್ಬರಿಗೆ ಅದು ಚೆನ್ನಾಗಿ ಕಂಡರೂ ಬಹುತೇಕರು ಇದು ಫ್ಯಾಷನ್ ಅನ್ನೋ ಭರದಲ್ಲಿ ಗಡ್ಡ ಬಿಟ್ಟುಕೊಂಡು ಚೆನ್ನಾಗಿ ಕಾಣುತ್ತೇವೆ ಅನ್ನೋ ಭ್ರಮೆಯಲ್ಲಿರುತ್ತಾರೆ.

ಆದರೆ ಓಲೆ ಹಾಕಿಕೊಂಡು ಗಡ್ಡ ಬಿಟ್ಟುಕೊಂಡ ಮಾತ್ರಕ್ಕೆ ಯಾರೂ ಹೀರೋಗಳಾಗುವುದಿಲ್ಲ. ಬದಲಾಗಿ ಮಾಡುವ ಕೆಲಸಕ್ಕೊಂದು ಅರ್ಥವಿರಬೇಕು. ಈ ತೆರೆ ಮೇಲೆ ಕಾಣಿಸಿಕೊಳ್ಳುವವರನ್ನು ನೋಡಿ ಅನೇಕರು ಅವರನ್ನೇ ಅನುಸರಿಸುತ್ತಾರೆ. ಹೀಗಾಗಿ ನಾಲ್ಕು ಜನರು ತಮ್ಮನ್ನು ನೋಡುತ್ತಾರೆ ಅಂದ ಮಾತ್ರಕ್ಕೆ ಎಂತೆಂಥದ್ದೋ ಮಾಡಿ ಫ್ಯಾಷನ್ ಅನ್ನೋದು ಸರಿಯಲ್ಲ ಅಲ್ಲವಾ?ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ