ಬಿಜೆಪಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ: ಸಿದ್ದರಾಮಯ್ಯ

Karnataka Government crisis

08-07-2019

ಬೆಂಗಳೂರು: ಬಿಜೆಪಿಗೆ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಅವರಿಗೆ ಸ್ಪಷ್ಟ ಬಹುಮತವೂ ಇಲ್ಲ, ಬೇರೆ ಪಕ್ಷಗಳ ಬೆಂಬಲವೂ ಇಲ್ಲ. ಆದರೂ ಸಹ ಅಸಂವಿಧಾನಿಕ ಮಾರ್ಗದ ಮೂಲಕ ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಸರ್ಕಾರ ರಚಿಸುವ ವಿಫಲ ಯತ್ನಕ್ಕೆ ಕೈಹಾಕಿದೆ.‌ ಇದೂ ಸಹ ಹಿಂದಿನಂತೆ ಯಶಸ್ವಿಯಾಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮೈತ್ರಿ ಸರ್ಕಾರದ ಡೋಲಾಯಮಾನ ಸ್ಥಿತಿಯ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ತನ್ನ ಅಂಗ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಾಮಮಾರ್ಗದ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಇಳಿದಿದೆ. ಇದರ ಹಿಂದೆ ರಾಜ್ಯ ಬಿಜೆಪಿ ನಾಯಕರಷ್ಟೇ ಅಲ್ಲ, ಕೇಂದ್ರದ ಕೈವಾಡ ಕೂಡ ಸ್ಪಷ್ಟವಾಗಿದೆ. ಈ ಬಾರಿಯ ಪ್ರಯತ್ನದಲ್ಲಿ ಬಿಜೆಪಿ ತನ್ನ ಕೈವಾಡವೇ ಇಲ್ಲ ಎಂಬ ಹೊಸನಾಟಕ ಶುರುಮಾಡಿದೆ ಅಷ್ಟೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಜೊತೆಗೆ, 2008ರಲ್ಲಿ ಯಡಿಯೂರಪ್ಪನವರು ಇದೇ ರೀತಿ ನಮ್ಮ ಶಾಸಕರಿಂದ ರಾಜೀನಾಮೆ ಕೊಡಿಸಿ, ಕೋಟ್ಯಂತರ ಹಣ ಸುರಿದ ಉಪಚುನಾವಣೆಯಲ್ಲಿ ಗೆಲ್ಲಿಸುವ ಪ್ರಯತ್ನ ಮಾಡಿದ್ದರು. ಅದರ ಮುಂದುವರಿದ ಭಾಗವೇ ಈ ಬಾರಿಯ ಆಪರೇಷನ್ ಕಮಲ. ಈ ಹಿಂದೆ ಐದು ಬಾರಿ ಸರ್ಕಾರ ಕೆಡಹುವ ವಿಫಲ ಯತ್ನ ಮಾಡಿದ್ದರು, ಅದಕ್ಕೆ ಈ ಬಾರಿಯ ಪ್ರಯತ್ನ ಇನ್ನೊಂದು ಹೊಸ ಸೇರ್ಪಡೆಯಾಗುತ್ತದೆ ಅಷ್ಟೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ, ನಮ್ಮ ಪಕ್ಷದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಹಜವಾಗಿ ಕೆಲವರಿಗೆ ಬೇಸರವಿದೆ. ಅದನ್ನು ಸರಿಪಡಿಸುವುದಕ್ಕಾಗಿ ನಮ್ಮ ಮಂತ್ರಿಗಳೆಲ್ಲರೂ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಪಕ್ಷದ ಭವಿಷ್ಯ ಮುಖ್ಯವೇ ಹೊರತು ವೈಯಕ್ತಿಕಸ್ಥಾನಮಾನ ಮುಖ್ಯವಲ್ಲ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Siddaramaiah BJP Congress MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ