ಸಚಿವ ನಾಗೇಶ್ ರಾಜಿನಾಮೆ: ಬಿಜೆಪಿಗೆ ಬೆಂಬಲ

Karnataka Government in crisis

08-07-2019

ಬೆಂಗಳೂರು: ಇತ್ತೀಚೆಗಷ್ಟೇ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ್ ದಿಢೀರ್ ಬೆಳವಣಿಗೆಯೊಂದರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದ ನಾಗೇಶ್ ಬಿಜೆಪಿ ಬೆಂಬಲಿಸುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದಾರೆ. ಈಗಾಗಲೇ 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ. ಈ ಬೆಳವಣಿಗೆಗಳ ನಡುವೆಯೇ ಸಣ್ಣ ಕೈಗಾರಿಕೆ ಸಚಿವರಾಗಿದ್ದ ಎಚ್.ನಾಗೇಶ್ ಇಂದು ದಿಢೀರನೆ ರಾಜೀನಾಮೆ ನೀಡಿರುವುದು ಸರಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿರುವ ಅವರು ನೇರವಾಗಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಗುರುತಿಸಿಕೊಂಡಿದ್ದ ನಾಗೇಶ್, ಸರ್ಕಾರದಲ್ಲಿ ಉಳಿಯುತ್ತಾರೆ ಎಂಬ ನಂಬಿಕೆ ಬಲವಾಗಿತ್ತು. ಜೂ.14ರಂದು ಸಂಪುಟಕ್ಕೆ ಸೇರ್ಪಡೆಯಾಗಿದ್ದ ಎಚ್.ನಾಗೇಶ್ ಮತ್ತು ಆರ್.ಶಂಕರ್‍ಗೆ ಹತ್ತು ದಿನವಾದರೂ ಖಾತೆಗಳನ್ನೇ ನೀಡಿರಲಿಲ್ಲ. ಇದು ಇಬ್ಬರಿಗೂ ತೀವ್ರ ಮುಜುಗರ ತಂದಿತ್ತು. ನಂತರ ನಾಗೇಶ್‍ಗೆ ಸಣ್ಣ ನೀರಾವರಿ, ಆರ್.ಶಂಕರ್‍ಗೆ ಪೌರಾಡಳಿತ ಖಾತೆಯನ್ನು ನೀಡಲಾಗಿತ್ತು. ಇದೀಗ ನಾಗೇಶ್ ರಾಜೀನಾಮೆ ನೀಡಿ ಅತೃಪ್ತರ ಬಣ ಸೇರಿಕೊಳ್ಳಲು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಈಗಾಗಲೇ 13 ಮಂದಿ ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಬಲ 105ಕ್ಕೆ ಕುಸಿದಿದೆ.


ಸಂಬಂಧಿತ ಟ್ಯಾಗ್ಗಳು

Minister BJP Nagesh Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ