ಕುತೂಹಲಕರ ಘಟ್ಟದಲ್ಲಿ ರಾಜ್ಯ ರಾಜಕೀಯ

Kannada News

10-06-2017

ರಾಜ್ಯ ಸರ್ಕಾರ ನಾಲ್ಕುವರ್ಷದ ಅಧಿಕಾರವಧಿ ಪೂರ್ಣಗೊಳಿಸಿ 5ನೇ ವರ್ಷಕ್ಕೆ ಕಾಲಿಟ್ಟಿದೆ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲು ಇನ್ನು ಒಂದು ವರ್ಷ ಬಾಕಿಯಿರುವಂತೆ ಎಲ್ಲೆಡೆ ಚುನಾವಣೆ ಕಾವು ತೀವ್ರಗೊಂಡಿದೆ. ಶತಾಯಗತಾಯ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಹಠ ತೊಟ್ಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯದೆಲ್ಲೆಡೆ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ವಿರುದ್ಧ ಕೇಳಿ ಬರುತ್ತಿರುವ ಟೀಕೆ ಟಿಪ್ಪಣಿ, ಪಕ್ಷದಲ್ಲಿನ ಭಿನ್ನಮತದ ಬಗ್ಗೆ ಸೊಪ್ಪು ಹಾಕದ ಅವರು ತಮ್ಮದೇ ಶೈಲಿಯಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ.

ಮತ್ತೊಂದೆಡೆ  ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಗಾದರೂ ಮಾಡಿ ಈ ಬಾರಿ ಅಧಿಕಾರ ಗದ್ದುಗೆ ಹಿಡಿಯಲೇಬೇಕೆಂದು ರಣತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ತಮ್ಮ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದು ತಮ್ಮ ಪುತ್ರನಿಗೆ ಮುಖ್ಯಮಂತ್ರಿ ಪಟ್ಟಾಭಿಷೇಕ ಮಾಡಲು ಬೇಕಾದ ಎಲ್ಲಾ ಕ್ರಮಗಳ ಮೂಲಕ ಚಾಣಾಕ್ಷ ರಾಜಕಾರಣ ಮಾಡುತ್ತಿದ್ದಾರೆ.

ತಮ್ಮ ತಂದೆಯ ಸೂಚನೆಯಂತೆ ರಾಜಕಾರಣ ಮಾಡುತ್ತಿರುವ ಕುಮಾರಸ್ವಾಮಿ ಉತ್ತರ ಕರ್ನಾಟಕದಲ್ಲಿ ಬಿರುಸಿನ ಪ್ರವಾಸ ಮಾಡುತ್ತಿದ್ದಾರೆ. ಪಕ್ಷದಲ್ಲಿನ ಸಣ್ಣ-ಪುಟ್ಟ ಗೊಂದಲ ಇತ್ಯರ್ಥ ಪಡಿಸುತ್ತಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಸಮಧಾನವಿರುವ ಹಿರಿಯ ನಾಯಕನರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಮೂಲಕ ಪಕ್ಷದ ಸಂಘಟನೆಯ ಜಾಲ ವಿಸ್ತರಣೆ ಮಾಡುತ್ತ ಚುನಾವಣೆಯ ಸಿದ್ದತೆಯನ್ನು ನಡೆಸಿದ್ದಾರೆ.

ಎರಡೂ ಪ್ರತಿಪಕ್ಷಗಳು ಇಂತಹ ತಂತ್ರದಲ್ಲಿ ನಿರತವಾಗಿರುವ ವೇಳೆ ಮತ್ತೊಂದು ಅವಧಿಗೆ ಪಕ್ಷದ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲು. ದೇಶದಲ್ಲಿ ಬೀಸಿದ ಮೋದಿ ಅಲೆಯ ಪರಿಣಾಮ ಕಾಂಗ್ರೆಸ್ ನೆಲಕಚ್ಚಿ ಹೋಗಿದೆ. ಯಾವುದೇ ರಾಜ್ಯದಲ್ಲಿ ಆ ಪಕ್ಷದ ಸಾಧನೆ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಇಲ್ಲ. ಕರ್ನಾಟಕವೊಂದೆ ಕಾಂಗ್ರೆಸ್ ಆಡಳಿತವಿರುವ ದೊಡ್ಡ ರಾಜ್ಯ ಹೀಗಾಗಿ ಇಲ್ಲಿ ಪಕ್ಷವನು ಮತ್ತೆ ಅಧಿಕಾರಕ್ಕೆ ತರಲೇಬೇಕಾದ ಅನಿವಾರ್ಯತೆ ಪಕ್ಷದ ಎಲ್ಲಾ ನಾಯಕರಿಗಿದೆ. ಒಂದು ವೇಳೆ  ಕರ್ನಾಟಕದಲ್ಲೇನಾದರೂ ಹಿನ್ನಡೆ ಅನುಭವಿಸಿದರೆ ದೇಶದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್‍ಗೆ ದೊಡ್ಡ ಪೆಟ್ಟು ಬೀಳಲಿದೆ ಎಂಬ ತತ್ವ ಎಲ್ಲಾ ಕಾಂಗ್ರೆಸ್ ನಾಯಕರಿಗೂ ಇದೆ.

ಇದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರಿಗಿರುವ ಸವಾಲಾದರೆ. ರಾಜ್ಯದಲ್ಲಿ ಅಧಿಕಾರಾವಧಿ ಪೂರ್ಣಗೊಳಿಸುತ್ತಿರುವ ಸರ್ಕಾರಕ್ಕೆ ಸಹಜವಾಗಿ ಕೊಂಚ ಮಟ್ಟಿನ ಆಡಳಿತ ವಿರೋಧಿ ಆಲೆ ಇದ್ದೇ ಇರುತ್ತದೆ. ಇನ್ನು ಸರ್ಕಾರದ ವಿರುದ್ದ ಅತ್ಯಂತ ಗಂಭೀರ ಸ್ವರೂಪವಲ್ಲವಾದರೂ ಕೆಲವು ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿವೆ. ತೀವ್ರತರವಾದ ಬರಗಾಲವಿದ್ದರೂ ಕೆಲವು ಮಂತ್ರಿಗಳು, ಶಾಸಕರು ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಸೋಮಾರಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಕೆಲಸ ಮಾಡುವಂಥೆ ಮಾಡಲು ಸಾಧ್ಯವಾಗಲಿಲ್ಲ. ಹಲವು ಕಡೆ ಕುಡಿಯುವ ನೀರಿಗೆ ತೀವ್ರ ಅಭಾವವಿದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂಬ ಅಸಮಧಾನವಿದೆ.

ಜನಸಾಮಾನ್ಯರಲ್ಲಿ ಇಂತಹ ವಿರೋಧವಿದ್ದರೆ, ಪಕ್ಷದ ಆಂತರಿಕ ವಲಯದಲ್ಲೂ ಹಲವು ಸಮಸ್ಯೆಗಳಿವೆ. ಸಿಎಂ ಕಾರ್ಯಕರ್ತರಿಗೆ ಸಿಗುತ್ತಿಲ್ಲ. ಪಕ್ಷದ ಕಚೇರಿಗೆ ಬರುತ್ತಿಲ್ಲ. ಕಾರ್ಯಕರ್ತರ ಸಂಕಷ್ಟ ಕೇಳುತ್ತಿಲ್ಲ, ಸಿಎಂ ಸುತ್ತ ಕೆಲವೇ ಮಂದಿ ಸುತ್ತುವರಿದಿರುತ್ತಾರೆ, ಅವರ ದೂರುಗಳಿಗೆ ಸಿಎಂ ಹೆಚ್ಚಿನ ಮನ್ನಣೆ ಕೊಡುತ್ತಾರೆ. ಇದರ ಪರಿಣಾಮ ಹಲವು ಮಂದಿ ಹಿರಿಯ ನಾಯಕರು ಪಕ್ಷ ಬಿಡುತ್ತಿದ್ದಾರೆ ಎಂದು ಹಲವಾರು ಮಂದಿ ವರಿಷ್ಠರಿಗೆ ದೂರು ನೀಡಿದ್ದಾರೆ. ಇದರ ನಡುವೆ ಮೂಲ ಮತ್ತು ವಲಸಿಗ ಎಂಬ ಅಂತರ ಮುಂದುವರೆದಿದೆ. ಬಡವರಿಗೆ ಉನ್ನತ ಹುದ್ದೆ ನೀಡಬೇಕೆಂಬ ಕೂಗು ಪ್ರಬಲವಾಗಿದೆ. ಇದರ ನಡುವೆ ಎಲ್ಲರನ್ನೂ ಸರಿಯಾಗಿಸಿಕೊಂಡು ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯಲೇಬೇಕು. ಇಂತಹ ಅನಿವಾರ್ಯತೆಯಲ್ಲಿ ಪಕ್ಷ ಮತ್ತು ಅದರ ನಾಯಕತ್ವ ಸಿಲುಕಿದೆ.

ಇಂತಹ ಅಗತ್ಯ ಮತ್ತು ಅನಿವಾರ್ಯತೆಯಲ್ಲಿ ಸಿಲುಕಿರುವ ಹೈಕಮಾಂಡ್ ಎಲ್ಲಾ ಗೊಂದಲ ಬಗೆಹರಿಸಿ ಹೊಸ ಉತ್ಸಾಹದೊಂದಿಗೆ ಪಕ್ಷ ಅಧಿಕಾರಕ್ಕೆ ತರಲು ಏನು ಮಾಡಬೇಕೆಂಬುದರ ಬಗ್ಗೆ ಅಭಿಯಾನ ನಡೆಸಿ ಅದರಂತೆ ಕ್ರಮ ಕೈಗೊಳ್ಳಲು ಸೂಚಿಸಿ ಕೆ.ಸಿ. ವೇಣುಗೋಪಾಲ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೀಡಿ ಕಳುಹಿಸಲಾಗಿದೆ. ಅದರಂಥೆ ವೇಣುಗೋಪಾಲ್ ತಮ್ಮ ತಂಡದೊಂದಿಗೆ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಎಲ್ಲರ ಅಭಿಪ್ರಾಯ ಮತ್ತು ಸಲಹೆಯನ್ನು ಆಧರಿಸಿ ಪಕ್ಷ ಪುನರ್ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯೊಂದನ್ನು ವರಿಷ್ಠರಿಗೆ ರವಾನಿಸಿದರು.

ಈ ವರದಿಯನ್ನು ಪರಿಶೀಲಿಸಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮತ್ತು ಯುವನಾಯಕ ರಾಹುಲ್ ರಾಜ್ಯದ ನಾಯಕರೇ ದೆಹಲಿಗೆ ಬರುವಂತೆ ಬುಲಾವ್ ನೀಡಿದರು. ಅದರಂತೆ ಸಿಎಂ ಸಿದ್ಧರಾಮಯ್ಯ ಪಕ್ಷದ ಅಧ್ಯಕ್ಷ ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್ ಮೊದಲಾದವರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದರು.

ಅದರಲ್ಲೂ ಪ್ರಮುಖವಾಗಿ ಗೃಹ ಸಚಿವರಾಗಿರುವ ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಹೊಸಬರನ್ನು ನೇಮಕ ಮಾಡಬೇಕು ಎಂಬ ಕೂಗು ಪ್ರಬಲವಾಗಿತ್ತು. ಸ್ವತಃ ಸಿಎಂ ಅವರೆ ಈ ರೀತಿಯ ವಾದ ಮಂಡಿಸುತ್ತಿದ್ದಾರೆ. ಪರಮೇಶ್ವರ್ ಅವರನ್ನು ಅಧ್ಯಕ್ಷಸ್ಥಾನದಿಂದ ಬದಲಾಯಿಸಿ ಈ ಹುದ್ದೆಯನ್ನು ಲಿಂಗಾಯಿತ ಸಮುದಾಯಕ್ಕೆ ಸೇರಿದ ಉತ್ತರ ಕರ್ನಾಟಕದವರಿಗೆ ನೀಡಬೇಕು. ಬಾಗಲಕೋಟೆಯ ಎಸ್.ಆರ್. ಪಾಟೀಲ್ ಅಥವಾ ವಿಜಯಪುರದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಈ ಹುದ್ದೆ ನೀಡುವುದು ಸೂಕ್ತ, ಕಾಂಗ್ರೆಸ್ ಉತ್ತರ ಕರ್ನಾಟಕ ಅದರಲ್ಲೂ ಲಿಂಗಾಯಿತ ಸಮುದಾಯವನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಲಿಂಗಾಯಿತ ವರ್ಗಕ್ಕೆ ಸೇರಿದ ಯಡಿಯೂರಪ್ಪ ಇದೇ ಅಂಶ ಮುಂದಿಡುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ದೃಷ್ಟಿಯಿಂದ ಲಿಂಗಾಯಿತ ಸಮುದಾಯಕ್ಕೆ ಸೇರಿದ ಈ ಇಬ್ಬರಲ್ಲಿ ಒಬ್ಬರನ್ನು ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಸೋನಿಯಾ ಮತ್ತು ರಾಹುಲ್ ಅವರಲ್ಲಿ ಪಟ್ಟು ಹಿಡಿದಿದ್ದರು.

ಮತ್ತೊಂದೆಡೆ ಇತ್ತೀಚೆಗೆ ನಡೆದ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಿಎಂ ಗಾಲಿಯ ಮೇಲೆ ಕಣ್ಣಿಟ್ಟಿದ್ದು ಅದಕ್ಕಾಗಿ ಪಕ್ಷದ ಸಾರಥ್ಯ ವಹಿಸಲು ಇನ್ನಿಲ್ಲದ ಕಸರತ್ತು ನಡೆಸಿದರು. ತಮ್ಮ  ಆಪ್ತ ನಾಯಕರು, ಶಾಸಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿಸಿದ ಅವರು ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರ ನಿಯೋಗ ದೆಹಲಿಗೆ ತೆರಳಿ ಮನವಿ ಸಲ್ಲಿಸುವಂತೆ ಮಾಡಿದ್ದರು.

ರಾಜ್ಯದಲ್ಲಿ ಎರಡನೇ ಅತಿದೊಡ್ಡ ಸಮುದಾಯವಾದ ಒಕ್ಕಲಿಗರಿಗೆ ಕಾಂಗ್ರೆಸ್ ಮತ್ತು ಸರ್ಕಾರದಲ್ಲಿ ಸೂಕ್ತ ಪ್ರಾತಿನಿದ್ಯ ಸಿಕ್ಕಿಲ್ಲ ಇದು ಸಮುದಾಯದಲ್ಲಿ ಅಸಮಾಧಾನ ಮಾಡಿಸಿದೆ ನಮಗೆ ಪಕ್ಷದ ಸಾರಥ್ಯ ನೀಡಿದರೆ ಈ ಅಸಮಾಧಾನ ದೂರವಾಗಿ, ಒಕ್ಕಲಿಗ ಸಮುದಾಯ ಕಾಂಗ್ರೆಸ್ ಬೆಂಬಲಿಸಲಿದೆ. ಇದರಿಂದ ಸಾಂಪ್ರದಾಯಿಕ ಅಹಿಂದ ಮತ ಬ್ಯಾಂಕ್ ಜತೆ ಒಕ್ಕಲಿಗರ ಮತ ಪಡೆಯುವ ಮೂಲಕ ಮತ್ತೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೆಂದು ವಾದಿಸಿದ್ದರು. ಅಲ್ಲದೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷತೆ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷತೆ ಲಿಂಗಾಯಿತರಿಗೆ ನೀಡಲಾಗಿದೆ. ಹಿಂದುಳಿದ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲೋಕಸಭೆಯ ಪ್ರತಿಪಕ್ಷನಾಯಕನ ಹುದ್ದೆ ನೀಡಲಾಗಿದೆ. ಹೀಗೆ ಎಲ್ಲಾ ಸಮುದಾಯಕ್ಕೆ ಕಾಂಗ್ರೆಸ್‍ನಲ್ಲಿ ಉನ್ನತ ಹುದ್ದೆ ಸಿಕ್ಕಿದೆ. ಆದರೆ ಒಕ್ಕಲಿಗರಿಗೆ ಇಂತಹ ಪ್ರಾತಿನಿಧ್ಯವಿಲ್ಲವೆಂದು ವಾದಿಸಿದ್ದರು. ಹೈಕಮಾಂಡ್ ಕೂಡ ಇವರ ವಾದ ಬೆಂಬಲಿಸಿತ್ತು. ಇದರಿಂದಾಗಿ ಡಿ.ಕೆ. ಶಿವಕುಮಾರ್ ಇನ್ನೇನು ಪಕ್ಷದ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆಂದೇ ಬಹುತೇಕ ಮಂದಿ ಭಾವಿಸಿದ್ದರು. ಅದೇ ಉತ್ಸಾಹದಲ್ಲಿ ಶಿವಕುಮಾರ್ ಕೂಡಾ ಕಾರ್ಯ ಆರಂಭ ಮಾಡಿದ್ದರು.

ಆದರೆ ದೆಹಲಿ ಮಟ್ಟದಲ್ಲಿ ನಡೆದ ರಾಜಕೀಯ ತಂತ್ರಗಾರಿಕೆಯೇ ಬೇರೆ ಆಗಿತ್ತು. ಡಿ.ಕೆ.ಶಿವಕುಮಾರ್ ಈ ಹಿಂದೆ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಮಂತ್ರಿಯಾಗಿ ನಡೆದುಕೊಂಡ ರೀತಿ, ಕಾರ್ಯಾಧ್ಯಕ್ಷರಾಗಿದ್ದ ವೇಳೆ ಪಕ್ಷ ಸಂಘಟನೆಯಲ್ಲಿ ಅಂತಹ ಆಸಕ್ತಿ ವಹಿಸದೇ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ  ಜೊತೆ ಹೊಂದಿದ್ದ ಸಖ್ಯವನ್ನು ಉಲ್ಲೇಖಿಸಿದ ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಕಾಂಗ್ರೆಸ್ಸಿಗರು ಶಿವಕುಮಾರ್‍ ಗೆ ದೊಡ್ಡ ಅಡ್ಡಿಯಾದರೆ, ಸ್ವತ: ಸಿಎಂ ಕೂಡಾ ಡಿ.ಕೆ.ಶಿವಕುಮಾರ್ ನೇಮಕಕ್ಕೆ ಒಲವು ತೋರಲಿಲ್ಲ.

ಅದರಲ್ಲೂ ಗುಂಡ್ಲು ಪೇಟೆ ಉಪಚುನಾವಣೆಯ ಗೆಲುವಿಗೆ ತಾವೂ ಸೇರಿದಂತೆ ಕಾಂಗ್ರೆಸ್‍ನ ಹಲವು ನಾಯಕರು ಬಾರಿ ಪ್ರಮಾಣದ ಕೊಡುಗೆ ನೀಡಿದ್ದರೂ ಅದನ್ನು ಮರೆ ಮಾಡಿ ತಮ್ಮ ಸಂಘಟನಾ ಚಾತುರ್ಯದಿಂದಲೇ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಎಂದು ಶಿವಕುಮಾರ್ ಬಿಂಬಿಸಿಕೊಂಡಿದ್ದು ಸಿಎಂ ಮತ್ತವರ ಆಪ್ತವಲಯದ ಕಣ್ಣು ಕೆಂಪಗಾಗಿಸಿತ್ತು. ಇಂತಹ ಆಕ್ರಮಣಾಶೀಲ ಮನೋಭಾವದ ಶಿವಕುಮಾರ್ ಪಕ್ಷದ ಸಾರಥಿಯಾದರೆ ದೊಡ್ಡ ಮಟ್ಟದ ಗೊಂದಲ ಉಂಟಾಗಲಿದೆ, ಹಲವಾರು ಕಾರಣಗಳಿಂದ ಶಿವಕುಮಾರ್ ಜೊತೆ ವಿರಸ ಹೊಂದಿರುವ ಹಲವರು ಕಾಂಗ್ರೆಸ್ ತೊರೆಯುವ ಅಪಾಯವಿದೆ ಎಂದು ಸಿಎಂ ವರಿಷ್ಠರಿಗೆ ಎಚ್ಚರಿಕೆ ನೀಡಿ ಶಿವಕುಮಾರ್ ನೇಮಕಾತಿಗೆ ಪ್ರಭಲ ತಡೆಗೊಡೆಯಾದರು.

ಇದರ ನಡುವೆ ರಾಹುಲ್ ಮತ್ತು ಸೊನಿಯಾ ಅವರನ್ನು ಭೇಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ ತಮ್ಮದೇ ವಾದ ಮಂಡಿಸುವ ಮೂಲಕ ಇಡೀ ಪ್ರಕ್ರಿಯೆಗೆ ಹೊಸ ಆಯಾಮ ನೀಡಿದರು. ಈ ಚರ್ಚೆಯ ವೇಳೆ ಖರ್ಗೆ ರೇಸ್ ನಲ್ಲಿರುವ ಯಾರ ಪರವೂ ವಕಾಲತ್ತು ವಹಿಸಿಲ್ಲ, ಬದಲಿಗೆ ಕರ್ನಾಟಕದಲ್ಲಿನ ರಾಜಕೀಯ ಸ್ಥಿತಿಗತಿ, ಪಕ್ಷ ಅದಿಕಾರಕ್ಕೆ ತರಲು ಇರುವ ತೊಡಕುಗಳು ಮತ್ತು ಅದರ ನಿವಾರಣೆಗೆ ತಮ್ಮದೆ ಅನುಭವದ ಆಧಾರದ ಸಲಹೆಯನ್ನು ನೀಡಿದರು. ಖರ್ಗೆ ಅವರ ವಾದ ಸಲಹೆ ಆಲಿಸಿದ ರಾಹುಲ್ ಮತ್ತು ಸೋನಿಯಾ ಕರ್ನಾಟಕ ಕಾಂಗ್ರೆಸ್ ಕುರಿತ ತಮ್ಮ ಇದೇ ಅಭಿಪ್ರಾಯವನ್ನ ಬದಲಾಯಿಸಿದರು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಸೇರಿ ಹಲವೆಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕರ್ನಾಟಕದಲ್ಲಿ ದಲಿತ ಮತ ಬ್ಯಾಂಕ್‍ ಗೆ ಲಗ್ಗೆ ಹಾಕಲು ಯತ್ನಿಸಿರುವ, ಯಡಿಯೂರಪ್ಪ ದಲಿತರ ಮನೆಗಳಲ್ಲಿ ಉಪಹಾರ, ಊಟದ ಮೂಲಕ ಮಾಡುತ್ತಿರುವ ರಾಜಕಾರಣವನ್ನು ವಿವರಿಸಿದರು.ಇದರ ಪರಿಣಾಮವಾಗಿ ಕಾಂಗ್ರೇಸ್ ಹೈಕಮಾಂಡ್ ಅಚ್ಚರಿಯ ಘೋಷಣೆ ಮಾಡಿತು.

ಇದರ ಪರಿಣಾಮವಾಗಿ ಕೆಪಿಸಿಸಿ ಅದ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರನ್ನು ಮುಂದುವರೆಸುವ ನಿರ್ಧಾರ ಕೈಗೊಂಡ ವರಿಷ್ಠರು ತಕ್ಷಣವೇ ಸಂಪುಟದಿಂದ ಹೊರ ಬರುವಂತೆ ಸೂಚಿಸಿತು. ಈ ಹುದ್ದೆಯ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್‍ ಗೆ ಪ್ರಚಾರ ಸಮಿತಿ ಅದ್ಯಕ್ಷರನ್ನಾಗಿ ನೆಮಿಸಿತು. ಅಲ್ಲದೇ ಸಂಪುಟದಲ್ಲಿ ಮುಂದುವರೆಯುವಂತೆ ಸೂಚನೆ ನೀಡಿತು, ಜೊತೆಗೆ  ಈಗಿರುವ ಖಾತೆಯ ಜೊತೆಗೆ ಮತ್ತೊಂದು ಪ್ರಮುಖ ಖಾತೆಯ ಜವಬ್ದಾರಿ ನೀಡುವಂತೆ ಸಿಎಂಗೆ ಸೂಚನೆ ನೀಡಿತು.

ಇನ್ನೂ ಉತ್ತರ ಕರ್ನಾಟಕ ಮತ್ತು ಲಿಂಗಾಯಿತರ ವಿಶ್ವಾಸ ಗಳಿಸುವ ದೃಷ್ಟಿಯಿಂದ ಪಕ್ಷದ ಅದ್ಯಕ್ಷ ಸ್ಥಾನ ನೀಡುವಂತೆ ಸಿಎಂ ಬೆಂಬಲವಿದ್ದ ಅಭ್ಯರ್ಥಿ ಎಸ್.ಆರ್. ಪಾಟೀಲ್ ಅವರನ್ನು ಕಾರ್ಯಾದ್ಯಕ್ಷರನ್ನಾಗಿ ಮಾಡಿ ಅವರಿಗೆ  ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡುವ ಘೋಷಣೆ ಹೊರಡಿಸಿತು. ಪಕ್ಷದ ಅಧ್ಯಕ್ಷತೆಗಾಗಿ ಪ್ರಬಲ ಲಾಭಿ ನಡೆಸಿದ್ದ ಹಿರಿಯ ನಾಯಕ, ಸಂಸದ ಕೆ.ಹೆಚ್.ಮುನಿಯಪ್ಪ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರಾಗಿ ನೇಮಿಸಿದೆ. ಬೆಳಗಾವಿ ರಾಜಕಾರಣದಿಂದ ಬೆಸತ್ತು ಕಾಂಗ್ರೆಸ್ ತೊರೆಯಲು ಸಜ್ಜುಗೊಂಡಿದ್ದ ವಾಲ್ಮೀಕಿ  ಸಮುದಾಯದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ಎಐಸಿಸಿ ಕಾರ್ಯದರ್ಶಿಯಾಗಿ ನೆಮಿಸುವ ಅಚ್ಚರಿಯ ಘೋಷಣೆ ಹೊರಡಿಸಿತು.

ಇಂತಹ ನೇಮಕಾತಿಯ ಆದೇಶದ ನಡುವೆಯೇ ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ ನಾಯಕತ್ವದಲ್ಲೇ ಎದುರಿಸಲಾಗುವುದು ಎಂಬ ಘೋಷಣೆ ಹೊರಡಿಸಿತು.  ಈ ಮೂಲಕ ಕಾಂಗ್ರೇಸ್  ಹೈಕಮಾಂಡ್ ನ  ಈ ಆದೇಶ ಮತ್ತು ಘೋಷಣೆಗೆ ಕಾಂಗ್ರೆಸ್ ಪಾಳಯವನ್ನಷ್ಟೇ ಅಲ್ಲ ಎಲ್ಲಾ ರಾಜಕೀಯ ಪಕ್ಷಗಳಲ್ಲೂ  ಅಚ್ಚರಿಯಲ್ಲಿ ಬೀಳುವಂತೆ ಮಾಡಿತು. ಕಾಂಗ್ರಸ್ ನ ಇತಿಹಾಸದಲ್ಲಿ ಎಂದಿಗೂ ಪಕ್ಷಕ್ಕೆ ಇಬ್ಬರು ಕಾರ್ಯಾದ್ಯಕ್ಷರ ನೇಮಕವಾಗಿರಲ್ಲಿಲ್ಲ, ಅಲ್ಲದೆ ಇಂತಹವರ   ನಾಯಕತ್ವದಲ್ಲಿ ಚುನಾವಣೆ ಎಂಬ ಘೋಷಣೆ ಹೊರ ಬಿದ್ದಿರಲಿಲ್ಲ. ಎಂತಹದೇ ಸಂದಿಗ್ಧ ಪರಿಸ್ಥಿತಿ ಇದ್ದರೂ, ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎಂಬ ಘೋಷಣೆ ಹೊರ ಬೀಳುತ್ತಿತ್ತು. ಆದರೆ ಇದೇ ಮೊದಲ ಬಾರಿ ಇಂತಹ ಅಚ್ಚರಿಯ ಘೋಷಣೆ.

ಕಾಂಗ್ರೇಸ್ ಹೈಕಮಾಂಡ್ ನ ಆದೇಶ  ಹಾಗೂ ಅಚ್ಚರಿಯ ಘೋಷಣೆ ಚಾಣಾಕ್ಷ ರಾಜಕೀಯ ನಡೆ ಎಂದೇ ಬಣ್ಣಿಸಲಾಗುತ್ತಿದೆ. ಕಾಂಗ್ರೆಸ್ ಆಡಳಿತವಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿ ಪಕ್ಷದ ಸರ್ಕಾರ ಮತ್ತೆ ಅಸ್ಥಿತ್ವಕ್ಕೆ ಬರಲೇ ಬೇಕೆನ್ನುವ ಅನಿವಾರ್ಯ ಪರಿಸ್ಥಿತಿ ಕಾಂಗ್ರೆಸ್ ಹೈಕಮಾಂಡ್‍ಗಿದೆ. ಹೀಗಾಗಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನೇಮಕಮಾಡಿದೆ.

ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ದಲಿತರ ಕೇರಿಗಳಲ್ಲಿ ಪಾದಯಾತ್ರೆ ಮಾಡುತ್ತ ಅವರ ಮತ ಗಿಟ್ಟಿಸುವ ಯತ್ನದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳ ವರದಿಗಳು ಬರುತ್ತಿವೆ. ಇಂತಹ ಸಮಯದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪರಮೇಶ್ವರ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವುದು ಸೂಕ್ತವಲ್ಲ, ಇದರಿಂದ ತಪ್ಪು ಸಂದೇಶ ಹೋಗಲಿದೆ ಎಂದು ಭಾವಿಸಿದ ಹೈಕಮಾಂಡ್ ಮತ್ತೊಂದು ಅವಧಿಗೆ ಪರಮೇಶ್ವರ್ ಅವರಿಗೆ ಪಕ್ಷದ ಸಾರಥ್ಯವನ್ನ ನೀಡಿ ರಾಜ್ಯದಲ್ಲಿ ಮತ್ತೆ ಸರ್ಕಾರವನ್ನ ಅಧಿಕಾರಕ್ಕೆ ತರಬೇಕೆನ್ನುವ ಗುರಿಯನ್ನು ಹೊಂದಿದೆ.

ಇನ್ನು ದಲಿತ ಸಿಎಂ ಎಂಬ ವಾದವನ್ನು ಮುಂದಿಟ್ಟುಕೊಂಡು ಹೋದರೆ ರಾಜ್ಯದಲ್ಲಿ ಮತದಾರ ಕಾಂಗ್ರೆಸ್ ಕೈ ಹಿಡಿಯುವುದಿಲ್ಲ ಎಂಬ ಖರ್ಗೆ ಅವರ ಅನುಭವದ ಮಾತಿಗೂ ಪಕ್ಷ ಮನ್ನಣೆ ನೀಡಿದೆ. ಅಲ್ಲದೇ ಸಹಜವಾಗಿ ಕೆಪಿಸಿಸಿ ಅಧ್ಯಕ್ಷರ ನೆತೃತ್ವದಲ್ಲೇ ಚುನಾವಣೆ ಎಂಬ ಸಂಪ್ರದಾಯವನ್ನು ಖರ್ಗೆ ಅವರ ಸಲಹೆ ಮೇರೆಗೆ ಇಲ್ಲಿ ಪಕ್ಷ ಮುರಿದಿದೆ, ಹೈಕಮಾಂಡ್ ಒಂದು ವೇಳೆ ಯಾರ ನಾಯಕತ್ವದಲ್ಲಿ ಚುನಾವಣೆ ಎಂಬ ಘೋಷಣೆ ಮಾಡದೇ ಹೋಗಿದ್ದರೆ, ಸದ್ಯ ಸಿದ್ದರಾಮಯ್ಯ ಬೆಂಬಲಕ್ಕಿರುವ ಕುರುಬ ಸಮುದಾಯದ ನಿಷ್ಠೆ ಬದಲಾಗುವ ಸಾದ್ಯತೆ ಇತ್ತು. ಅಲ್ಲದೇ ಮುಂದುವರಿದ ಸಮುದಾಯಗಳು ದಲಿತ ಸಿಎಂ ಎಂಬ ಘೋಷಣೆಯನ್ನು ಬೆಂಬಲಿಸುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಇಂತಹ ಘೊಷಣೆ ಮಾಡಿದೆ. ಈ ಮೂಲಕ ಕುರುಬ ಸಮುದಾಯದ ಮತ ಬ್ಯಾಂಕ್ ಗಟ್ಟಿಯಾಗುವುದರ ಜೊತೆಗೆ ದಲಿತರ ಮತಗಳು ಕೂಡ ಕಾಂಗ್ರೆಸ್‍ನಲ್ಲಿಯೇ ಉಳಿಯಲಿವೆ ಎಂಬ ಲೆಕ್ಕಚಾರ.

ಇನ್ನು ದಲಿತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಎಡಗೈ ವರ್ಗಕ್ಕೆ ಕಾಂಗ್ರೆಸ್‍ನಲ್ಲಿ ಸೂಕ್ತ ಪ್ರಾತಿನಿದ್ಯವಿಲ್ಲ ಎಂಬ ಕೂಗಿದೆ. ಇದನ್ನು ನಿಭಾಯಿಸುವ ದೃಷ್ಠಿಯಿಂದ ಎಡಗೈ ವರ್ಗಕ್ಕೆ ಸೇರಿದ ಕೆ.ಹೆಚ್ ಮುನಿಯಪ್ಪ ಅವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದ ಉನ್ನತ ಹುದ್ದೆ ನೀಡಲಾಗಿದೆ. ಈ ಮೂಲಕ ದಲಿತ ಸಮುದಾಯದ ಎಡಗೈ ಮತ್ತು ಬಲಗೈ ವರ್ಗದ ಮತಗಳು ಒಟ್ಟಾಗಿ ಕಾಂಗ್ರೆಸ್ ಬೆನ್ನಿಗೆ ನಿಲ್ಲಲಿವೆ ಎಂಬುದು ಕಾಂಗ್ರೆಸ್ ಚಿಂತಕರ ಚಾವಡಿಯ ಲೆಕ್ಕಚಾರದ ನಡೆಯಾಗಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಡೆದ ಚುನಾವಣೆ ಮತ್ತು ಅದರ ಫಲಿತಾಂಶದ ವಿಶ್ಲೇಷಣೆ ನಡೆಸಿದ ಹೈಕಮಾಂಡ್ ಖರ್ಗೆ ಅವರ ಸಲಹೆ ಮೇರೆಗೆ ಸಿದ್ದರಾಮಯ್ಯ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂಬ ನಿರ್ಧಾರ ಕೈಗೊಂಡಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗಾಗಿ ಮಂತ್ರಿ ಸ್ಥಾನ ತ್ಯಜಿಸಿದ ಎಸ್ ಆರ್ ಪಾಟೀಲ್ ಪಕ್ಷದ ಸಾರಥ್ಯ ವಹಿಸಲು ಸುಮಾರು ಒಂದು ವರ್ಷ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಮುಖ್ಯಮಂತ್ರಿ ಮತ್ತು ಈ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವೀಜಯ್ ಸಿಂಗ್ ಅವರ ಕೃಪಾಶೀರ್ವಾದ ಇವರ ಮೇಲಿತ್ತು ಹೀಗಾಗಿ ಬಹುತೇಕ ಇವರೇ  ಕಾಂಗ್ರೆಸ್ ಸಾರಥಿ ಎಂದು ಭಾವಿಸಲಾಗಿತ್ತು. ಅದರಲ್ಲೂ ಲಿಂಗಾಯಿತ ಸಮುದಾಯದ ಯಡಿಯೂರಪ್ಪ ಆ ವರ್ಗದ ಮತಗಳ ನಂಬಿಕೆಯೊಂದಿಗೆ ದಲಿತರ ಮತ ಸೆಳೆಯುವ ಲೆಕ್ಕಾಚಾರದಲ್ಲಿರುವಾಗ ಎಸ್.ಆರ್. ಪಾಟೀಲ್ ಆಯ್ಕೆ ಸಮಯೋಜಿತ ಎಂದೇ ಭಾವಿಸಲಾಗಿತ್ತು. ಜತೆಗೆ ಎಸ್.ಆರ್.ಪಾಟೀಲ್ ಕಳಂಕರಹಿತ ವ್ಯಕ್ತಿತ್ವವೂ ಇದಕ್ಕೆ ಸಹಕಾರಿಯಾಗಿತ್ತು.

ಆದರೆ ಯಡಿಯೂರಪ್ಪ ಅವರ ಜತೆ ಎಸ್.ಆರ್.ಪಾಟೀಲ್ ಅವರನ್ನು ಹೋಲಿಕೆ ಮಾಡಿದಾಗ ಲಿಂಗಾಯಿತರೇ ಇವರನ್ನು ತಮ್ಮ ನಾಯಕರು ಎಂದು ಯಡಿಯೂರಪ್ಪ ಅವರಂತೆ ಬಲವಾಗಿ ಒಪ್ಪಿಕೊಳ್ಳುವುದು ಕಷ್ಟ. ಅಷ್ಟೇ ಅಲ್ಲಾ ಇವರು ಸೌಮ್ಯವಾದಿ. ಚುನಾವಣಾ ಸಮಯದಲ್ಲಿ ಕೊಂಚ ಮಟ್ಟಿಗೆ ಆಕ್ರಮಣಕಾರಿ ವ್ಯಕ್ತಿತ್ವದವರು ಬೇಕು ಎಂಬ ಲೆಕ್ಕಾಚಾರ ಮಾಡಲಾಯಿತು. ಈ ಎಲ್ಲಾ ಚರ್ಚೆಯ ಬಳಿಕ ಎಸ್ ಆರ್ ಪಾಟೀಲ್ ಅವರನ್ನೂ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಇದು ಸ್ವತ: ಅವರಿಗೂ ಅತ್ಯಂತ ಖುಷಿ ತಂದಿದೆ. ಅದೂ ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿದೆ.  ಖರ್ಗೆ ಮೊದಲಾದ ಘಟಾನುಗಟಿ ನಾಯಕರಿರುವ ಹೈದ್ರಾಬಾದ್ ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಆದರೆ ಮುಂಬೈ ಕರ್ನಾಟಕ ಪ್ರಾಂತ್ಯದ ಬಾಗಲಕೋಟೆಯವರಾದ ಎಸ್ ಆರ್ ಪಾಟೀಲ್ ಅವಿಭಜಿತ ವಿಜಯಪುರದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಅಲ್ಲದೇ ತಮ್ಮ ಸಮುದಾಯದಲ್ಲೂ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ.

ಅದೇ ರೀತಿ ಮುಂಬೈ ಕರ್ನಾಟಕದ ಮತಗಳು ಹಾಗೂ ವಾಲ್ಮಿಕಿ ಸಮುದಾಯವನ್ನು ಒಲೈಸುವ ಸಲುವಾಗಿ ಸತೀಶ್ ಜಾರಕಿಹೋಳಿ ಅವರಿಗೆ ಎಐಸಿಸಿಯ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿದೆ. ಸಂಸದ ಬಿ.ಶ್ರೀರಾಮಲು ತಮ್ಮ ಸಮುದಾಯದ ಮತಗಳನ್ನು ಬಿಜೆಪಿಯತ್ತ ಸೆಳೆಯಲು ಯತ್ನಿಸುತ್ತಿರುವಾಗ ಈ ಸಮುದಾಯದ ಮೇಲೆ ತಮ್ಮದೇ ಪ್ರಭಾವ ಹೊಂದಿರುವ ಜಾರಕಿಹೋಳಿ ನೇಮಕ ಭರ್ಜರಿ ರಣತಂತ್ರವಾಗಿದೆ. ಈ ಮೂಲಕ ಪಕ್ಷದ ವಿದ್ಯಮಾನಗಳಿಂದ ಬೇಸರಗೊಂಡು ಜೆಡಿಎಸ್ ನತ್ತ ಮುಖಮಾಡಿದ್ದ ಜಾರಕಿಹೊಳಿ ಕಾಂಗ್ರೆಸ್‍ನಲ್ಲಿಯೇ ಉಳಿದಿದ್ದಾರೆ. ಅಲ್ಲದೆ, ಸಿಎಂ ಆಪ್ತ  ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಪಕ್ಷ ಬಿಡುವುದು ಅಷ್ಟು ಸೂಕ್ತವಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿತ್ತು.

ಇದನ್ನು ಮನಗಂಡ ವರಿಷ್ಠರು ಕೈಗೊಂಡ  ನಿರ್ಧಾರ ಬೆಂಗಳೂರು ಬಿಟ್ಟರೆ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ ದೊಡ್ಡ ಪರಿಣಾಮ ಬೀರಿದೆ. ಜಿಲ್ಲಾ ಕಾಂಗ್ರೆಸ್‍ನ ಆಂತರಿಕ ವಿದ್ಯಮಾನಗಳಿಗೆ ತಿಲಾಂಜಲಿ ಹಾಡಲಾಗಿದೆ. ಇದು ಪಕ್ಷದ ಮಟ್ಟಿಗೆ ದೊಡ್ಡ ನಿರ್ಣಯವೆಂದೇ ಭಾವಿಸಲಾಗುತ್ತಿದೆ.

ಒಟ್ಟಾರೆಯಾಗಿ ಕಾಂಗ್ರೆಸ್ ಹೈಕಮಾಂಡ್‍ನ ಈ ಪ್ಯಾಕೇಜ್ ಅತ್ಯಂತ ಚಾಣಾಕ್ಷ ನಡೆ ಎಂದೇ ಬಣ್ಣಿಸಲಾಗಿದೆ. ಈ ಹಿಂದೆ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಜೋಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಪಕ್ಷ ಅಧಿಕಾರಕ್ಕೆ ಬಂದ ನಂತರದಲ್ಲಿ ಆಗಾಗ್ಗೆ ಕೆಲವು ಗೊಂದಲಗಳಿದ್ದರೂ ಅವುಗಳನ್ನು ದೊಡ್ಡದು ಮಾಡದೇ ಸರ್ಕಾರದ ಭದ್ರತೆಗೆ ಅಪಾಯವಾಗದ ರೀತಿಯಲ್ಲಿ ನಡೆದುಕೊಂಡಿದ್ದು ದೇಶದಲ್ಲಿ ಮೋದಿ ಅಲೆ ಬೀಸುತ್ತಿದ್ದರೂ ಕಳೆದ ಸಂಸತ್ ಚುನಾವನೆಯಲ್ಲಿ ಕಾಂಗ್ರೆಸ್ ಸಾಧನೆ ಸಮಾಧಾನಕಾರಿ ಎಂಬುದು ಹೈಕಮಾಂಡ್‍ನ ಲೆಕ್ಕಾಚಾರ ಹೀಗಾಗಿಯೇ ಮತ್ತೆ ಇದೇ ಜೋಡಿಗೆ ಚುನಾವಣೆಯ ನೇತೃತ್ವ ನೀಡಲಾಗಿದೆ.

ಪಕ್ಷದ ಅಧ್ಯಕ್ಷರಾಗಿ ಮರು ನೇಮಕಗೊಂಡಿರುವ ಪರಮೇಶ್ವರ್ ವಿರುದ್ಧ ಯಾವುದೇ ರೀತಿಯ ಭ್ರಷ್ಟಾಚಾರ ಆರೋಪಗಳಿಲ್ಲ. ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದರೂ ಯಾವುದೇ ಕರ್ಮಕಾಂಡದ ಆರೋಪ ಇವರನ್ನು ಸುತ್ತಿಕೊಂಡಿಲ್ಲ. ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿ ಗೊಂದಲ, ಪೋಲಿಸರ ಬೇಡಿಕೆ ಈಡೇರಿಕೆ ಸಂಬಂಧ ಉಂಟಾದ ಗೊಂದಲ ಬಿಟ್ಟರೆ ಅಂತಹ ಯಾವುದೇ ಅಪವಾದಗಳಿಲ್ಲ. ಹೀಗಾಗಿ ಪರಮೇಶ್ವರ್ ಅವರ ಆಯ್ಕೆ ಅತ್ಯಂತ ಸೂಕ್ತ ಎಂಬಂತೆ ಬಣ್ಣಿಸಲಾಗುತ್ತಿದೆ.

ವಿದೇಶದಲ್ಲಿ ಕಲಿತು ಬಂದಿರುವ ಅತ್ಯಂತ ಸುಶಿಕ್ಷಿತ ರಾಜಕಾರಣಿ ಎಂದೇ ಬಿಂಬಿತವಾಗುತ್ತಿರುವ ಪರಮೇಶ್ವರ್ ಅಷ್ಟೊಂದು ಆಕ್ರಮಣಕಾರಿ ಅಲ್ಲವಾದರೂ ಪಕ್ಷವನ್ನು ಮುನ್ನಡೆಸುವ ಕುಶಾಗ್ರಮತಿ ಸಮಯಕ್ಕೆ ತಕ್ಕಂತೆ ಸ್ವಂತ ನಿರ್ಧಾರ ಕೈಗೊಳ್ಳುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರಶ್ನಾರ್ಹವಲ್ಲದ ಪಕ್ಷ ನಿಷ್ಟೇ ಇವರ ಬೆಂಗಾವಲಾಗಿದೆ. ಒಂದು ಹಂತದಲ್ಲಿ ತೀವ್ರಗೊಂಡಿದ್ದ ದಲಿತ ಮುಖ್ಯಮಂತ್ರಿ ಎಂಬ ಕೂಗಿಗೆ ಪರಮೇಶ್ವರ್ ಆಕ್ರಮಣಕಾರಿಯಾಗಿ ಸ್ಪಂದಿಸಿದ್ದರೆ, ಸಿದ್ದರಾಮಯ್ಯ ಪದಚ್ಯುತಿಗೆ ದೊಡ್ಡ ಹೋರಾಟವಾಗುತ್ತಿತ್ತು. ಪಕ್ಷದಲ್ಲಿ ದೊಡ್ಡ ಮಟ್ಟದ ಭಿನ್ನಮತ ಉಂಟಾಗುತ್ತಿತ್ತು. ಆದರೆ ಪರಮೇಶ್ವರ್ ಇದಕ್ಕೆ ಅವಕಾಶ ನೀಡಲಿಲ್ಲ ಮುಖ್ಯಮಂತ್ರಿಯಾಗಬೇಕೆಂದ ಮಹತ್ವಾಕಾಂಕ್ಷೆಯಿದ್ದರೂ ಅದನ್ನು ಹಠದಿಂದ ಪಡೆಯುತ್ತೇನೆ ಎಂಬ ವಾದ ಮಂಡಿಸದೇ ಸ್ವಾಭಾವಿಕವಾಗಿ ತಮ್ಮನ್ನು ಅರಸಿ ಬರಲಿ ಎಂಬ ಪರಮೇಶ್ವರ್ ಅವರ ನಿಲುವು ಮೆಚ್ಚುಗೆ ಗಳಿಸಿದೆ. ಹೀಗಾಗಿ ಎಲ್ಲಾ ವರ್ಗಗಳ ಮತದಾರರು ಪರಮೇಶ್ವರ್ ವಿಷಯದಲ್ಲಿ ಮೃದು ಧೋರಣೆ ಹೊಂದಿದ್ದಾರೆ. ಇದರ ಲಾಭವನ್ನು ಪಡೆಯುವ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್‍ದಾಗಿದೆ.

ಇನ್ನು ಪಕ್ಷದ ಪ್ರಚಾರ ಸಮಿತಿಗೆ ನೇಮಕಗೊಂಡಿರುವ ಶಿವಕುಮರ್ ಸಂಘಟನಾ ಚತುರ. ರಾಜ್ಯದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ತಮ್ಮದೇ ಅಭಿಮಾನಿ ಪಡೆಯನ್ನು ಹೊಂದಿದ್ದಾರೆ. ಅದರಲ್ಲೂ ಯುವ ಸಮುದಾಯ ಶಿವಕುಮರ್ ಬೆಂಬಲಕ್ಕಿದೆ. ಇದರಿಂದ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎನ್ನುವುದು ವರಿಷ್ಠರ ಲೆಕ್ಕಾಚಾರ. ಹೀಗಾಗಿ ಅವರಿಗೆ ಪಕ್ಷದ ಪ್ರಚಾರ ಸಮಿತಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಣೆ ಮಾಡಲಿದೆ. ಮತದಾರರ ಒಲೈಕೆಗೆ ಪ್ರಚಾರ ತಂತ್ರ ಕೂಡ ಪರಿಣಾಮಕಾರಿ ಅಸ್ತ್ರ ಇದರಲ್ಲಿ ಶಿವಕುಮಾರ್ ಪಳಗಿದ ರಾಜಕಾರಣಿ ಹೀಗಾಗಿ ಇದೊಂದು ಉತ್ತಮ ಕ್ರಾಂತಿ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಕಾಂಗ್ರೆಸ್ ಹೈಕಮಾಂಡ್ ಈ ಚಾಣಾಕ್ಷ ಪ್ಯಾಕೇಜ್ ರಾಜ್ಯ ಕಾಂಗ್ರೆಸ್‍ಗೆ ಹೊಸ ಬಲ ತಂದಿದೆ. ಬ್ರಾಹ್ಮಣ ಸಮುದಾಯದ ದಿನೇಶ್ ಗುಂಡುರಾವ್, ಲಿಂಗಾಯತ್ ಸಮುದಾಯದ ಎಸ್.ಆರ್. ಪಾಟೀಲ್ ಒಕ್ಕಲಿಗ ವರ್ಗದ ಶಿವಕುಮಾರ್ ಹಿಂದುಳಿದ ವರ್ಗಗಳ ಸಿದ್ದರಾಮಯ್ಯ ಪರಿಶಿಷ್ಟ ವರ್ಗದ ಜಾರಕಿಹೊಳಿ, ದಲಿತ ಸಮುದಾಯದ ಪರಮೇಶ್ವರ್ ಮತ್ತು ಕೆ.ಎಚ್. ಮುನಿಯಪ್ಪ ನೇಮಕ. ನೂತನ ಸಮೀಕರಣವಾಗಿದೆ. ದಲಿತ, ಹಿಂದುಳಿದ ಹಾಗೂ ಮುಂದುವರೆದ ಸಮುದಾಯಗಳ ನಾಯಕತ್ವದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಹೊಸ ಪ್ರಯೋಗ ಆರಂಭಿಸಿದೆ.ಇದು ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ವರದಾನವಾಗಲಿದೆ ಎಂಬುದು ವರಿಷ್ಠರ ನಿರೀಕ್ಷೆ ಮತ್ತು ಆಶಾವಾದ

ಹೈಕಮಾಂಡ್‍ನ ಈ ಆಶಾವಾದ ಮತ್ತು ನಿರೀಕ್ಷೆ ಆರಂಭದಲ್ಲಿಯೇ ಕೊಂಚ ವಿಘ್ನ ಉಂಟಾಗಿದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಷಯದಲ್ಲಿ ಮತ್ತೆ ಸಿಎಂ ಮತ್ತು ಪರಮೇಶ್ವರ್ ನಡುವೆ ಹಗ್ಗ-ಜಗ್ಗಾಟ ನಡೆದಿದೆ. ಸಿಎಂ ಯಾರು ಎಂಬ ಪ್ರಶ್ನೆಗೆ ಚುನಾವಣೆ ನಂತರ ಆಯ್ಕೆಯಾದ ಶಾಸಕರ ಅಭಿಪ್ರಾಯ ಆಲಿಸಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರೆ ಸಿದ್ದರಾಮಯ್ಯ ಮುಂದೆಯೂ ತಾನೇ ಸಿಎಂ ಎನ್ನುತ್ತಿದ್ದಾರೆ. ಇದರೊಂದಿಗೆ ಇವರ ಆಪ್ತ ಸಚಿವರೂ ಕೂಡಾ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲೂ ಸಚಿವ ಮಹಾದೇವಪ್ಪ ಅವರಂತೂ ಸಂವಿಧಾನದಲ್ಲಿ ಸಿಎಂ, ಒಕ್ಕಲಿಗ, ಲಿಂಗಾಯಿತ, ಹಿಂದುಳಿದ ಸಿಎಂ ಎಂಬ ಉಲ್ಲೇಖವಿಲ್ಲ. ಯಾರಾದರೂ ಈ ರೀತಿಯ ವಾದ ಮಂಡನೆ ಮಾಡಿದರೆ ಅದು ಸಂವಿಧಾನ ವಿರೋಧಿಯಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಂತರ ಅವರೇ ಎದುರಿಸಲಾಗುವುದು ಎಂದು ಘೋಷಣೆ ಮಾಡಿದೆ. ಹೀಗಾಗಿ ಚುನಾವಣೆಯ ನಂತರ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎನ್ನುತ್ತಾರೆ. ಆದರೆ ದಲಿತ ಸಮುದಾಯ ನಾಯಕರು ಮಾತ್ರ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ.

ಇದರಿಂದ ಹುರುಪು ಪಡೆದವರಂತೆ ಪರಮೇಶ್ವರ್ ಗೊಂದಲಮಯವಾದ ಹೇಳಿಕೆಗಳ ಬಗ್ಗೆ ತಲೆ ಕಡಿಸಿಕೊಳ್ಳದೆ ಪಕ್ಷದ ಸಂಘಟನೆಯತ್ತ ಗಮನ ಹರಿಸಿದ್ದಾರೆ. ನೂತನ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹಾಗೂ ದಿನೇಶ್‍ಗುಂಡುರಾವ್ ಅವರೊಂದಿಗೆ ರಾಜ್ಯದ ಎಲ್ಲಾ ಪ್ರಮುಖ ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಬೇಡುತ್ತಿದ್ದಾರೆ. ಜತೆಯಲ್ಲಿ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದು ಹಲವು ಜಿಲ್ಲಾ ಘಟಕಗಳ ಪುನಾರಚನೆ ನೂತನ ಪದಾಧಿಕಾರಿಗಳ ನೇಮಕದತ್ತ ಗಮನಹರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಆದರೆ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಡಿಕೆಶಿವಕುಮಾರ್ ಅವರ ನಿಲವು ಮಾತ್ರ ಪಕ್ಷಕ್ಕೆ ಆರಂಭದಲ್ಲಿಯೆ ತೀವ್ರ ಹಿನ್ನೆಡೆ ಉಂಟುಮಾಡಿದೆ. ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದ ಪ್ರಸ್ತಾವನೆ ಇದ್ದಾಗ ವರಿಷ್ಠರ ಮುಂದೆಯೇ ನಿರಾಕರಿಸಿದ್ದ ಶಿವಕುಮಾರ್ ತಮಗೆ ಕೊಟ್ಟರೆ ಅಧ್ಯಕ್ಷ ಸ್ಥಾನ ಕೊಡಿ ಇಲ್ಲವಾದರೆ ಈಗಿರುವ ಹುದ್ದೆಯಲ್ಲೇ ಮುಂದುವರೆಯುತ್ತೆನೆ ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ ಎಂದು ಹೇಳಿದ್ದರು. ಆದರೆ ಕೇಳದ ಹೈಕಮಾಂಡ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದೆ.

ಇದರಿಂದ ಬೇಸರಗೊಂಡಿರುವ ಅವರು ಸಿಎಂ ಮತ್ತು ಪರಮೇಶ್ವರ್ ಜತೆ ಮುನಿಸಿಕೊಂಡಿದ್ದಾರೆ. ನೇಮಕದ ನಂತರ ನಡೆದ ಸಂಪುಟ ಸಭೆಗೂ ಹಾಜರಾಗಿಲ್ಲ. ವಿಧಾನಸೌಧದತ್ವದಲ್ಲೂ ಸುಳಿದಿಲ್ಲ. ತಮ್ಮ ನಿವಾಸಕ್ಕೆ ಅಧಿಕಾರಿಗಳನ್ನು ಕರೆಸಿಕೊಂಡು ಇಂಧನ ಇಲಾಖೆ ನಿರ್ವಹಣೆ ಮಾಡುತ್ತಿದ್ದಾರೆ. ಪರಮೇಶ್ವರ್ ಮಠಾಧೀಶರ ಭೇಟಿಗೆ ಬರುವಂತೆ ಕರೆದರೂ ಕೂಡಾ ಹೋಗದೆ ದೂರ ಉಳಿದಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಹೈಕಮಾಂಡ್‍ನ ಚಾಣಾಕ್ಷ ನಡೆಗೆ ಆರಂಭಿಕ ಅಡ್ಡಿಯಾಗಿದೆ.

ವರಿಷ್ಠರು ತಕ್ಷಣವೇ ಮಧ್ಯ ಪ್ರವೇಶಿಸಿ ಅಗತ್ಯ ಸೂಚನೆಯ ಮೂಲಕ ಶಿವಕುಮರ್ ಮುನಿಸು ಶಮನ ಮಾಡಬೇಕು ಅಲ್ಲದೇ ಸಿದ್ದರಾಮಯ್ಯ-ಪರಮೇಶ್ವರ್-ಶಿವಕುಮಾರ್ ಒಟ್ಟಾಗಿ ಪಕ್ಷ ಸಂಘಟನೆಯತ್ತ ಗಮನಹರಿಸಿದರೆ  ಮಾತ್ರ ತಂತ್ರಗಾರಿಕೆ ಯಶಸ್ವಿಯಾಗಲಿದೆ, ಇಲ್ಲವಾದರೆ ಚುನಾವಣೆ ಸಮಯದಲ್ಲಿ ಗುಂಪುಗಾರಿಕೆ ಬೆಳೆಯುವ ಮೂಲಕ ಪಕ್ಷಕ್ಕೆ ಹಿನ್ನಡೆ ಉಂಟಾಗುವುದರಲ್ಲಿ ಸಂದೇಹವಿಲ್ಲ ಹೀಗಾಗಿ ಇದು ಎಚ್ಚರಗೊಳ್ಳಲು ಸಕಾಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ