ರೌಡಿಶೀಟರ್ ಲಗ್ಗೆರೆ ಸೀನನ ಬಂಧನ

Laggere Seena is arrested

04-07-2019

ಬೆಂಗಳೂರು: ಕೊಲೆ ಕೊಲೆಯತ್ನ ಸುಲಿಗೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಕುಖ್ಯಾತ ರೌಡಿ ಸೀನ ಅಲಿಯಾಸ್ ಲಗ್ಗೆರೆ ಸೀನನಿಗೆ ಮಲ್ಲೇಶ್ವರಂ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಜಾಲಹಳ್ಳಿ ಸಿಗ್ನಲ್‍ನ ನೆಲಗದರನಹಳ್ಳಿಯ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಸೀನ ಬೆನ್ನಟ್ಟಿ ಬಂದ ಪೊಲೀಸ್ ಪೇದೆ ಸುನಿಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸ್ ಇನ್ಸ್‍ಪೆಕ್ಟರ್ ಕೆ.ಆರ್. ಪ್ರಸಾದ್ ಅವರು ಗುಂಡು ಹಾರಿಸಿ ಬಂಧಿಸಿದ್ದಾರೆ. ಬಲಗಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ಪೀಣ್ಯಾ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಲಗ್ಗೆರೆ ಸೀನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳೆದ ಜೂನ್ 17 ರಂದು ಮಧ್ಯರಾತ್ರಿ ಮಲ್ಲೇಶ್ವರಂ 8ನೇ ಕ್ರಾಸ್‍ನ ಚಂದೂಸ್ ಹೊಟೇಲ್ ಬಳಿ ಗಣೇಶ್ ಎಂಬುವವನನ್ನು ಕೊಲೆಮಾಡಿ ಪರಾರಿಯಾಗಿದ್ದ ಸೀನ, ಇಂದು ಮಧ್ಯಾಹ್ನ 1ರ ವೇಳೆ ಗಂಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಮಾಹಿತಿ ಆಧರಿಸಿ, ಇನ್ಸ್‍ಪೆಕ್ಟರ್ ಕೆ.ಆರ್. ಪ್ರಸಾದ್, ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದೆ.

ಪೊಲೀಸರನ್ನು ನೋಡಿದ ತಕ್ಷಣ ಪರಾರಿಯಾಗಲು ಸೀನ ಯತ್ನಿಸಿದ್ದು, ಈ ವೇಳೆ ಬೆನ್ನಟ್ಟಿ ಪೇದೆ ಸುನಿಲ್ ಕುಮಾರ್ ಹೋಗಿದ್ದು, ಅವರ ಕೈಗೆ ಚಾಕುವಿನಿಂದ ಇರಿದು ಸೀನ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ, ಸೀನ ಪರಾರಿಯಾಗಲು ತೊಡಗಿದ್ದು, ಮತ್ತೊಂದು ಗುಂಡು ಹಾರಿಸಿದ್ದಾರೆ. ಅದು ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Arrest Laggere Seena Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ