ಶರಾವತಿ ನೀರು ಬಳಕೆ ನಿರ್ಧಾರಕ್ಕೆ ಆಕ್ಷೇಪಿಸಿ ಪ್ರತಿಭಟನೆ

Protest

03-07-2019

ಬೆಂಗಳೂರು:  ಶರಾವತಿ ನದಿ ನೀರನ್ನು ಲಿಂಗನಮಕ್ಕಿ ಅಣೆಕಟ್ಟಿನಿಂದ ಬೆಂಗಳೂರು ನಗರಕ್ಕೆ ತರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಲೆನಾಡು ವಕೀಲರು ಹಾಗೂ ಪಶ್ಚಿಮ ಘಟ್ಟಗಳ ಪರಿಸರ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪುರಭವನದ ಮುಂಭಾಗ ನಗರದಲ್ಲಿ ನೆಲೆಸಿರುವ ಮಲೆನಾಡು ವಕೀಲರು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರ ಅಭಿಪ್ರಾಯಗಳನ್ನು ಪಡೆಯದೆ, ಶರಾವತಿ ನದಿ ನೀರನ್ನು ಲಿಂಗನಮಕ್ಕಿ ಅಣೆಕಟ್ಟಿನಿಂದ ನಗರಕ್ಕೆ ಹರಿಸುವ ನಿರ್ಧಾರ ಅವೈಜ್ಞಾನಿಕವಾದುದು ಎಂದು ಆರೋಪಿಸಿದರು.

ಶಿವಮೊಗ್ಗ, ಉತ್ತರ ಕನ್ನಡ, ಎರಡೂ ಜಿಲ್ಲೆಗಳಲ್ಲಿ ಕಳೆದ 50 ವರ್ಷದಲ್ಲಿ 180 ಕಿ.ಮೀಟರ್ ವ್ಯಾಪ್ತಿಯಲ್ಲಿ ಸೂಪಾ, ಗೇರುಸೊಪ್ಪೆ, ವರಾಯಿ, ಲಿಂಗನಮಕ್ಕಿ ಡ್ಯಾಂ ಗಳಿಗೆ ಕಟ್ಟಲಾದ ಕಿರುಅಣೆಕಟ್ಟೆಗಳು ಸೇರಿದಂತೆ, 18 ಅಣೆಕಟ್ಟೆಗಳನ್ನು ಸರ್ಕಾರ ನಿರ್ಮಿಸಿದ್ದು, ಇದರಿಂದ ಸಾವಿರಾರು ಕುಟುಂಬಗಳು ಮತ್ತು ಕೃಷಿ ಕಾರ್ಮಿಕರ ಕುಟುಂಬಗಳು ನಿರ್ಗತಿಕವಾಗಿವೆ ಎಂದು ಅವರು ಆರೋಪಿಸಿದರು.

ಇದೇ ವೇಳೆ ಸರ್ಕಾರ, ಶರಾವತಿ ನೀರನ್ನು ನಗರಕ್ಕೆ ಹರಿಸುವ ಮೂಲಕ ಆ ಭಾಗದ ಜನರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ. ಅಣೆಕಟ್ಟು ನಿರ್ಮಾಣವಾಗುವ ವೇಳೆ ಸಾವಿರಾರು ಕೃಷಿ ಭೂಮಿಗಳನ್ನು ರೈತರು ಕಳೆದುಕೊಂಡಿದ್ದರೂ, ಅವರಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

ಮಲೆನಾಡಿನಲ್ಲಿ ನಿರ್ಮಿಸಿರುವ ಹಲವು ವಿದ್ಯುತ್ ಯೋಜನೆಗಳಿಂದಾಗಿ ಈಗಾಗಲೇ ಸಾವಿರಾರು ಅರಣ್ಯ ಭೂಮಿ ನಾಶವಾಗಿದೆ. ಸರ್ಕಾರ ನಿರ್ಮಿಸಿರುವ ಅಣೆಕಟ್ಟೆಗಳಿಂದ ವಿದ್ಯುತ್ ಅನ್ನು ಪಡೆಯಬೇಕು ಎಂದು ಒತ್ತಾಯಿಸಿದರು.


ಸಂಬಂಧಿತ ಟ್ಯಾಗ್ಗಳು

Sharavathi Protest Water Western ghats


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ