ನೊಂದವರ ದಿನ, ಜನ ಸ್ನೇಹಿ ಪೊಲೀಸ್ ಠಾಣೆ; ಅಲೋಕ್ ಕುಮಾರ್ ಹೊಸ ಸೂತ್ರ

Alok kumar

03-07-2019

ಬೆಂಗಳೂರು: ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತಿದಿನ ಸಂಜೆ 4.30 ರಿಂದ 6.30ರವರೆಗೆ ಠಾಣಾಧಿಕಾರಿಗಳು ತುರ್ತು ಕೆಲಸವನ್ನು ಹೊರತುಪಡಿಸಿ, ಜನರ ಸಮಸ್ಯೆಯನ್ನು ಕಡ್ಡಾಯವಾಗಿ ತಿಳಿದುಕೊಂಡು ಅವರ ದೂರಿನ ಬಗ್ಗೆ ಪರಾಮರ್ಶೆ ನಡೆಸಲು ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಅವರು ತಿಳಿಸಿದರು.

ಠಾಣೆಗೆ ಸಮಸ್ಯೆ ಹೇಳಿಕೊಂಡು ಬರುವವರಿಗೆ ಟೋಕನ್ ನೀಡಲಾಗುವುದು. ಟೋಕನ್ ಪಡೆದವರು ಠಾಣೆಯಲ್ಲಿ ತಮ್ಮ ಸಮಸ್ಯೆಗೆ ಸರಿಯಾದ ಪರಿಹಾರ ದೊರೆಯದಿದ್ದರೆ ಅಥವಾ ತೃಪ್ತಿಯಾಗದಿದ್ದರೆ, ಮೇಲಧಿಕಾರಿಗಳ ಬಳಿ ಹೋಗಬಹುದು ಎಂದರು.

ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಲಾಗುವುದು, ಕೋರಮಂಗಲದ ಬಳಿ ಮಾದರಿ ಜನಸ್ನೇಹಿ ಪೊಲೀಸ್ ಠಾಣೆಯನ್ನು ಆರಂಭಿಸಲಾಗಿದ್ದು, ಅಲ್ಲಿ ದೂರು ಸ್ವೀಕರಿಸುವುದು ಮಾತ್ರವಲ್ಲದೆ, ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದು ಹೇಳಿದರು.

ನೊಂದವರ ದಿನ

ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನೊಂದವರ ದಿನ ನಡೆಸಲಾಗುವುದು ಕೊಲೆ, ಸುಲಿಗೆ, ಕೊಲೆಯತ್ನ, ಅತ್ಯಾಚಾರ, ಇನ್ನಿತರ ಅಪರಾಧ ಪ್ರಕರಣಗಳಲ್ಲಿನ ಸಂತ್ರಸ್ತರು, ನೊಂದವರ ದಿನದಲ್ಲಿ ತಮ್ಮ ಪ್ರಕರಣದ ಪ್ರಗತಿ, ತಮಗಿರುವ ಬೆದರಿಕೆ,ಇನ್ನಿತರ ಸಮಸ್ಯೆಗಳನ್ನು ಠಾಣಾಧಿಕಾರಿಗಳಿಗೆ ತಿಳಿಸಬಹುದು ಎಂದರು.

ಸಾಕ್ಷಿದಾರರು ಹಾಗೂ ನೊಂದವರಿಗೆ ಭಯ, ಆತಂಕವಿದ್ದರೆ, ಅವರಿಗೆ ರಕ್ಷಣೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು,ನೊಂದವರು ವಾಸಿಸುವ ಸ್ಥಳಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಿ, ಆತ್ಮವಿಶ್ವಾಸ ಹೆಚ್ಚಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂರು ಪಾಳಯದಲ್ಲಿ ಗಸ್ತು

ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಗಸ್ತನ್ನು ಜಾರಿಗೊಳಿಸಲಾಗುವುದು.ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಗಸ್ತನ್ನು ಚುರುಕುಗೊಳಿಸುವ ಅಗತ್ಯವಿದೆ. ಹಾಗಾಗಿ ಗಸ್ತನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಹೆಲ್ಮೆಟ್ ಜಾಗೃತಿ

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸುವ ಪ್ರಮಾಣ ಹೆಚ್ಚಾಗುತ್ತಿದೆ ಹೆಲ್ಮೆಟ್ ಧರಿಸದೇ ಹೋಗುವ ದ್ವಿಚಕ್ರವಾಹನ ಸವಾರರಿಗೆ ದಂಡ ವಿಧಿಸುವುದರಿಂದ ಮಾತ್ರ ಹೆಲ್ಮೆಟ್ ಕಡ್ಡಾಯ ಜಾರಿ ಸಾಧ್ಯವಾಗುತ್ತಿಲ್ಲ ಹೀಗಾಗಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
 


ಸಂಬಂಧಿತ ಟ್ಯಾಗ್ಗಳು

Alok kumar IPS IGP Crime


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ