ಬೆಂಗಳೂರು ಪೊಲೀಸರ ಭರ್ಜರಿ ಬೇಟೆ

Bengaluru Police

03-07-2019

ಬೆಂಗಳೂರು: ಕಾರುಗಳ್ಳರು ಬೈಕ್‍ಗಳ್ಳರು ಗಮನ ಬೆರೇಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಖದೀಮರು ಸೇರಿ 10 ಮಂದಿ ರಾಜ್ಯ, ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು 15 ಕಾರುಗಳು, 49 ದ್ವಿಚಕ್ರ ವಾಹನಗಳು 800 ಗ್ರಾಂ ಚಿನ್ನಾಭರಣಗಳು ಸೇರಿ 1 ಕೋಟಿ 68 ಲಕ್ಷದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರಿನ ಕೀ ಯನ್ನು ಟ್ಯಾಬ್‍ನ ತಂತ್ರಜ್ಞಾನ ಬಳಸಿ, ಲಾಕ್ ತೆಗೆದು ಕಳವು ಮಾಡಿ ಮೋಜು ಮಾಡುತ್ತಿದ್ದ ತಮಿಳುನಾಡಿನ ವೆಲ್ಲೂರಿನ ಬಾಬು ಹಾಗೂ ಚೆನ್ನೈನ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂನನ್ನು ಬಂಧಿಸಿ, ಒಂದು ಕೋಟಿ ರೂ. ಮೌಲ್ಯದ 15 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ 3, ಸೂರ್ಯಸಿಟಿಯಲ್ಲಿ 5, ಕೋರಮಂಗಲ, ಚೆನ್ನೈ ತಲಾ 1, ಹೆಬ್ಬಗೋಡಿಯಲ್ಲಿ 2  ಸೇರಿದಂತೆ, 15 ಕಾರುಗಳನ್ನು ಕಳವು ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಗಮನ ಬೇರೆಡೆ ಸೆಳೆದು ಕಳವು

ಕಾರು ಕಳ್ಳರ ಜೊತೆಗೆ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ 10 ಪ್ರಕರಣಗಳು ಬೇಧಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಮಿಳುನಾಡಿನ ತಿರಪ್ಪತ್ತೂರಿನ ಶಬರಿ (38), ಜೋಲಾರ್ ಪೇಟೆಯ ಬಾಲಾಜಿ (49), ಸುಭಾಷ್ (20) ಸೇರಿ ಮೂವರನ್ನು ಬಂಧಿಸಿ ಗಮನ ಬೇರೆಡೆ ಸೆಳೆದು ಕಳವು ಮಾಡಿದ್ದ 28 ಲಕ್ಷ ರೂ. ಮೌಲ್ಯದ 800 ಗ್ರಾಂ. ಚಿನ್ನಾಭರಣ, 2.5 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿವಾಳ ಪೊಲೀಸರು, ಕೇರಳದ ವಯನಾಡು ಜಿಲ್ಲೆಯ ಜೋಸಿನ್ ಟಿಟೋಸ್ (20), ಸಿಮ್‍ಜಿತ್ ಶಶಿಕುಮಾರ್ (22)ನನ್ನು ಬಂಧಿಸಿ, 12 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮೋಜು ಮಾಡಲು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು.

ಅಪ್ರಾಪ್ತ ಬಾಲಕ ವಶ

ಆಡುಗೋಡಿ ಪೊಲೀಸರು ಬೈಕ್ ಕಳವು ಮಾಡುತ್ತಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ವಶಕ್ಕೆ ಪಡೆದುಕೊಂಡು 13 ಲಕ್ಷ ರೂ. ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಮೋಜಿನ ಜೀವನಕ್ಕಾಗಿ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡಲ್ ಮುರಿದು ಕಳವು ಮಾಡುತ್ತಿದ್ದ. ಈತನಿಂದ ಹೊಸಕೋಟೆಯ 3, ಮಾಲೂರಿನ 2, ಆಡುಗೋಡಿಯ 1 ಸೇರಿದಂತೆ, 18 ದ್ವಿಚಕ್ರ ವಾಹನಗಳ ಕಳವಿನ ಪ್ರಕರಣದಲ್ಲಿ 5 ವಾಹನಗಳ ವಾರಸುದಾರರು ಪತ್ತೆಯಾಗಬೇಕಾಗಿದೆ ಎಂದರು.

ಪರಪ್ಪನ ಅಗ್ರಹಾರದ ಪೊಲೀಸರು, ಜೆಪಿನಗರದ ದೀಪಕ್ (18), ತಮಿಳುನಾಡಿನ ವಾಣಿಯಂಬಾಡಿಯ ಸುಹೇಲ್ (23)ನನ್ನು ಬಂಧಿಸಿ, 12 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Bengaluru Theft Police Arrest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ