ಸಹಪಾಠಿಯಾಗಿದ್ದ ಕಿರುತೆರೆ ನಟ ನಿಂದ ಕಿರುತೆರೆ ನಟಿಯ ಮೇಲೆ ಅತ್ಯಾಚಾರ

classmate cum serial actor rapes serial actress

03-07-2019

ಬೆಂಗಳೂರು: ಕಿರುತೆರೆ ನಟಿಯೊಬ್ಬರ ಮೇಲೆ ಸಹಪಾಠಿಯಾಗಿದ್ದ ಕಿರುತೆರೆನಟ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ನಿರಂತರ ಅತ್ಯಾಚಾರ ವೆಸಗಿರುವ ಹೀನಕೃತ್ಯ ಬೆಳಕಿಗೆ ಬಂದಿದೆ.
ಕೃತ್ಯ ನಡೆಸಿದ ಕಿರುತೆರೆನಟ ಹಾಗೂ ಪ್ರೊಡೆಕ್ಷನ್ ಮ್ಯಾನೇಜರ್ ತೇಜಸ್ ಗೌಡ ಅಲಿಯಾಸ್ ಅಭಿಗೌಡನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಎಂದು ಕಿರುತೆರೆ ನಟಿಯೊಬ್ಬರು ನೀಡಿದ ದೂರು ದಾಖಲಿಸಿದ್ದ ಚಿಕ್ಕಬಳ್ಳಾಪುರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ನಟಿಯು ದೂರಿನಲ್ಲಿ 2012ರಲ್ಲಿ ಚಿಕ್ಕಬಳ್ಳಾಪುರ ನಗರ ಹೊರವಲಯದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದ ತೇಜಸ್ ಗೌಡ ತನ್ನನ್ನು ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ಸಲುಗೆಯಿಂದ ವರ್ತಿಸಿ ತನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನು ನಾನು ವಿರೋಧಿಸಿದ್ದಕ್ಕೆ, ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮತ್ತೆ ಆನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ.
ಇದೇ ರೀತಿ ಅವಕಾಶ ಸಿಕ್ಕಾಗಲೆಲ್ಲಾ ನನ್ನ ಜೊತೆ ಅಭಿಗೌಡ ದೈಹಿಕ ಸಂಪರ್ಕ ಬೆಳೆಸುತ್ತಿದ್ದನು. ನಂತರ ಇಬ್ಬರು ಖಾಸಗಿ ವಾಹಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆವು. ಆ ಸಮಯದಲ್ಲಿ ನನಗೆ ಬೇರೋಬ್ಬರ ಜೊತೆ ಸಂಬಂಧ ಇದೆ ಎಂದು ಹೇಳಿ ತುಂಬಾ ಗಲಾಟೆ ನಡೆಸಿ ನನ್ನ ಮೇಲೆ ಹಲ್ಲೆ ನಡೆಸಿದ್ದ. ಆಗಲೂ ನಾನು ಆತನ ವಿರುದ್ಧ ದೂರು ನೀಡಿರಲಿಲ್ಲ. ಒಂದು ವಾರದ ನಂತರ ಅಂದರೆ ಡಿಸೆಂಬರ್ 2018ರಲ್ಲಿ ನಾನು ರೂಮಿನಲ್ಲಿದ್ದಾಗ ಮತ್ತೆ ಬಂದು ನಿನ್ನನ್ನು ಮದುವೆಯಾಗವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದ ನಾನು ಗರ್ಭಿಣಿಯಾದೆ.
ನಾನು ಗರ್ಭಿಣಿಯಾಗಿದ್ದೇನೆ ಎಂಬ ವಿಷಯ ತೇಜಸ್‍ಗೆ ತಿಳಿಸಿದರೆ,ನೀನು ಯಾರೊಂದಿಗೋ ಇದ್ದು ಗರ್ಭಿಣಿಯಾಗಿದ್ದೀಯಾ.ನನ್ನ ಜೊತೆ ಯಾಕೆ ಹೇಳುತ್ತೀಯಾ ಎಂದು ಗಲಾಟೆ ಮಾಡಿ ಮಾತ್ರೆ ತಿನ್ನು ಸರಿ ಹೋಗುತ್ತೆ ಎಂದು ಹೇಳಿ ಬೈದಿದ್ದಾನೆ. ನಂತರ ನಾನು ಬೆಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿಕೊಂಡಿರುತ್ತೇನೆ.ಇಷ್ಟೆಲ್ಲ ಆದರೂ ಅಭಿಗೌಡ ನನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ ಆತ ಬೇರೆ ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.
ಈ ಬಗ್ಗೆ ನಾನು ಗಲಾಟೆ ಮಾಡಿದ್ದಕ್ಕೆ ಏನ್ ಮಾಡಿಕೊಳ್ಳುತ್ತಿಯೋ ಮಾಡಿಕೋ.ಎಲ್ಲವನ್ನು ನಾನು ಎದುರಿಸುತ್ತೇನೆ. ನೀನೇನಾದರೂ ದೂರು ಕೊಟ್ಟರೆ ನಮ್ಮಿಬ್ಬರ ಖಾಸಗಿ ಪೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ. ನೀನು ಧಾರವಾಹಿಯಲ್ಲಿ ನಟಿಸಲು ಆಗದಂತೆ ಮುಖಕ್ಕೆ ಆ್ಯಸಿಡ್ ಹಾಕಿ ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಹೀಗಾಗಿ 2012ರಿಂದಲೂ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಮಾಡಿ ಈಗ ನನಗೆ ಮೋಸ ಮಾಡಿ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿರುವ ಅಭಿಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ತೇಜಸ್ ಗೌಡ ಅಲಿಯಾಸ್ ಅಭಿಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape Love cheating Marriage promises serial actor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ