ಕಾಂಗ್ರೆಸ್‍ನ ಇಬ್ಬರು ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ: ಹೆಚ್.ಕೆ.ಪಾಟೀಲ್

BJP is behind congress MLAs resign to assembly

02-07-2019

ಬೆಂಗಳೂರು- ರಾಜ್ಯ ಕಾಂಗ್ರೆಸ್‍ನ ಇಬ್ಬರು ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಸಚಿವ ಹೆಚ್.ಕೆ.ಪಾಟೀಲ್,ಈ ಕೆಲಸ ಮಾಡುವ ಮೂಲಕ ಸರ್ಕಾರ ಬೀಳಿಸಲು ಪೂರಕವಾದ ಅರಾಜಕತೆಯನ್ನು ಸೃಷ್ಟಿ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ಕೊಡಿಸುವುದರ ಹಿಂದೆ ಬಿಜೆಪಿ ಅವರ ಕೈವಾಡ ಇದೆ. ರಾಜ್ಯದಲ್ಲಿ ಬಿಜೆಪಿ ಅರಾಜಕತೆ ಸೃಷ್ಟಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಂದಾಲ್ ವಿಚಾರವಾಗಿ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ್, ಜಿಂದಾಲ್ ಸಂಸ್ಥೆಗೆ ಭೂಮಿ ಕೊಡಲು ಸಂಪುಟ ಅನುಮೋದನೆ ನೀಡಿತ್ತು. ಸಚಿವ ಸಂಪುಟಕ್ಕೂ ಮೊದಲು ನಾನು ಪತ್ರ ಬರೆದು ಜಿಂದಾಲ್ ಸಂಸ್ಥೆಗೆ ಭೂಮಿ ನೀಡಬಾರದೆಂದು ಮನವಿ ಮಾಡಿದ್ದೆ ಎಂದು ಹೇಳಿದರು.

ಇದಾದ ನಂತರ ಮತ್ತೆ ಸಚಿವ ಕೆ.ಜೆ. ಜಾರ್ಜ್ ಅವರಿಗೂ ಪತ್ರ ಬರೆದಿದ್ದೆ. ಆ ಬಳಿಕ ಈ ವಿಷಯನ್ನು ಸಂಪುಟ ಉಪ ಸಮಿತಿಗೆ ನೀಡಲಾಗಿದೆ. ಉಪ ಸಮಿತಿ ಏನು ವರದಿ ನೀಡುತ್ತದೆಯೋ ನೋಡೋಣ. ವರದಿ ನೀಡುವವರೆಗೂ ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.

ಒಂದು ವೇಳೆ ಆನಂದ್ ಸಿಂಗ್ ಅವರು ಜಿಂದಾಲ್ ವಿಚಾರದಲ್ಲಿ ತಪ್ಪು ಕಲ್ಪನೆಯಿಂದ ರಾಜೀನಾಮೆ ಕೊಟ್ಟಿದ್ದರೆ ತಕ್ಷಣ ವಾಪಸ್ ಪಡೆಯಬೇಕು. ಇದೇ ವಿಚಾರಕ್ಕೆ ರಾಜೀನಾಮೆ ಕೊಟ್ಟಿದ್ರೆ ಅದು ಆತುರದ ನಿರ್ಧಾರ ಮಾಡಿದಂತೆ ಆಗುತ್ತದೆ. ಸಂಪುಟ ಉಪ ಸಮಿತಿ ವರದಿ ಬರುವವರೆಗೂ ಆನಂದ್ ಸಿಂಗ್ ಯಾವುದೇ ನಿರ್ಧಾರಕ್ಕೆ ಬರಬಾರದು.

ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡೋದು ಸರಿಯಲ್ಲ. ಅವರು ಕೂಡಲೇ ರಾಜೀನಾಮೆಯನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿದರು.

ಉಪ ಸಮಿತಿ ವರದಿ ಬಂದ ನಂತರ ಈ ಬಗ್ಗೆ ಆನಂದ್ ಸಿಂಗ್ ನಿರ್ಧಾರ ಮಾಡಲಿ. ವರದಿ ಬಂದ ಬಳಿಕ ನಾನೂ ಮಾತನಾಡುತ್ತೇನೆ. ಉಪ ಸಮಿತಿ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ ಎಂದರು.

ಕಳೆದ ಆರೇಂಟು ತಿಂಗಳಿಂದ ರಾಜೀನಾಮೆ ಕೊಡುತ್ತೇವೆ. ಸರ್ಕಾರ ಬೀಳಿಸುತ್ತೇವೆ ಎಂಬ  ಮಾತುಗಳು ನಡೆಯುತ್ತಿವೆ. ಅಮಾವಾಸ್ಯೆ, ಹುಣ್ಣಿಮೆ, ಪೌರ್ಣಿಮೆ ಅಂತ ರಾಜೀನಾಮೆ ಕೊಡುತ್ತೇವೆಂದು ಹೇಳಿರುವುದನ್ನೂ ನೋಡಿದ್ದೇವೆ. ಇದು ಕೆಟ್ಟ ರಾಜಕೀಯದ ಹಾದಿ ಎಂದು ಹೇಳಿದರು.

ನಮ್ಮ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಇದ್ದಾರೆ. ಅವರು ರಾಜೀನಾಮೆ ಬಗ್ಗೆ ಯೋಚನೆ ಮಾಡೋದು ತಪ್ಪು. ಬಿಜೆಪಿ ಅವರು ಅರಾಜಕತೆ ಸೃಷ್ಟಿ ಮಾಡಲು ಹೊರಟಿದ್ದಾರೆ. ನಿಮಗೆ (ಬಿಜೆಪಿಗೆ) ಸರ್ಕಾರದ ಮೇಲೆ ಅವಿಶ್ವಾಸ ಇದ್ದರೆ ಅಧಿವೇಶನ ಬರ್ತಿದೆ ಅಲ್ಲಿ ಪರೀಕ್ಷೆ ಮಾಡಿ. ಅದು ಬಿಟ್ಟು ರಾಜೀನಾಮೆ ಕೊಡಿಸೋದು ಸರಿಯಲ್ಲ. ಇದು ಆರೋಗ್ಯಕರವಾದ ರಾಜಕಾರಣ ಅಲ್ಲ ಎಂದು ಕಿಡಿಕಾರಿದರು


ಸಂಬಂಧಿತ ಟ್ಯಾಗ್ಗಳು

H K Patil Congress JDS BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ