ರಾಜ್ಯದ ಹಲವೆಡೆ ಪ್ಲಾಸ್ಟಿಕ್ ಅಕ್ಕಿ ಆತಂಕ! ತನಿಖೆಗೆ ಆದೇಶ

Kannada News

09-06-2017

ಬೆಂಗಳೂರು:- ರಾಜ್ಯದ ಹಲವೆಡೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ಮಾರಾಟದ ಸತ್ಯಾಸತ್ಯತೆ ಬಗ್ಗೆ ಸಂಪೂರ್ಣ ವರದಿ ತರಸಿಕೊಂಡು ಸಮಗ್ರ ತನಿಖೆಗೆ ಆದೇಶಿಸುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿಂದು ಹೇಳಿದರು. ಶೂನ್ಯ ವೇಳೆಯಲ್ಲಿ ಬಿಜೆಪಿಯ ಸಿ.ಟಿ ರವಿ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು ಪ್ಲಾಸ್ಟಿಕ್ ಅಕ್ಕಿ ಹಾಗೂ ಮೊಟ್ಟೆ ತಯಾರಿಕೆ ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಮಾರಾಟವಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಇದು ಸುಳ್ಳು ಅಂತನೂ ಹೇಳಲು ನಾನು ಸಿದ್ಧನಿಲ್ಲ. ಇದು ನಿಜವೋ ಅಥವಾ ಗಾಸಿಪ್ ಎಂಬುದರ ಬಗ್ಗೆ ಎಲ್ಲವನ್ನು ಪರಿಶೀಲಿಸಿ ಸೋಮವಾರದೊಳಗೆ ವರದಿ ತರಿಸಿಕೊಳ್ಳುತ್ತೇನೆ. ಅಲ್ಲಿಯವರೆಗೂ ಸಮಯ ಕೊಡಿ ವರದಿ ಬಂದ ನಂತರ ಸಮಗ್ರ ತನಿಖೆಗೆ ಆದೇಶಿಸುತ್ತೇನೆ ಎಂದರು. ಪ್ಲಾಸ್ಟಿಕ್ ಅಕ್ಕಿ ಹಾಗೂ ಮೊಟ್ಟೆಗಳ ಬಗ್ಗೆ ವರದಿಗಳನ್ನು ಗಮನಿಸಿದ್ದೇನೆ. ಅಂಗಡಿಗಳಿಗೆ ದಿಢೀರ್ ಭೇಟಿ ನೀಡಲು ತೀರ್ಮಾನಿಸಿದ್ದೆ. ಅಧಿವೇಶನ ಇರುವುದರಿಂದ ಸಾಧ್ಯವಾಗಿಲ್ಲ. ವೈಜ್ಞಾನಿಕವಾಗಿ ಇದು ಸಾಧ್ಯವೇ ಎಂಬ ಬಗ್ಗೆ ಯೋಚಿಸಬೇಕಿದೆ. ಕೆಲವರು ಆತಂಕ ಮೂಡಿಸಲು ಈ ವರದಿಗಳನ್ನು ಹರಿಯ ಬಿಟ್ಟಿರಬಹುದು. ಏನೇ ಆಗಲಿ ಇದರ ಮೂಲ ಎಲ್ಲದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು. ಇದಕ್ಕೆ ದನಿಗೂಡಿಸಿದ ಆಹಾರ ಸಚಿವ ಯು.ಟಿ ಖಾದರ್, ಪ್ಲಾಸ್ಟಿಕ್ ಅಕ್ಕಿ ಖಂಡಿತ ಸಾಧ್ಯವಿಲ್ಲ. ಅನ್ನಭಾಗ್ಯ ಯೋಜನೆಯಡಿಯಂತೂ ಇದಕ್ಕೆ ಅವಕಾಶವೇ ಇಲ್ಲ, ಅನ್ನಭಾಗ್ಯ ಯೋಜನೆಗೆ ಕೇಂದ್ರದ ಆಹಾರ ನಿಗಮದಿಂದ ಅಕ್ಕಿ ಖರೀದಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಪ್ಲಾಸ್ಟಿಕ್ ಅಕ್ಕಿಯಿಂದ ನೈಜ ಅಕ್ಕಿ ನೋಡಿದರೂ ಪ್ಲಾಸ್ಟಿಕ್ ಅಕ್ಕಿ ಎಂಬ ಅನುಮಾನ ಉಂಟಾಗಿದೆ. ಪ್ಲಾಸ್ಟಿಕ್ ಅಕ್ಕಿ ಇದ್ದರೆ ತೋರಿಸಲಿ ಎಂದು ಸವಾಲಿನ ದಾಟಿಯಲ್ಲಿ ಹೇಳಿದರು. ಸಚಿವ ಖಾದರ್ ಅವರ ಮಾತಿಗೆ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿ ರಮೇಶ್ ಕುಮಾರ್ ಅವರ ಉತ್ತರಕ್ಕೂ ಖಾದರ್ ಅವರ ಉತ್ತರಕ್ಕೂ ಎಷ್ಟು ವ್ಯತ್ಯಾಸವಿದೆ ನೋಡಿ, ನಾವೇ ತಂದು ತೋರಿಸಿ ಎಂದು ಹೇಳುತ್ತಿದ್ದಾರೆ. ಇವರು ಆಹಾರ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಪರೀಕ್ಷೆ ಮಾಡಿಸಲು ಆಗುವುದಿಲ್ಲವೇ ಎಂದು ಹರಿಹಾಯ್ದರು. ಈ ಹಂತದಲ್ಲಿ ಖಾದರ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಸಭಾಧ್ಯಕ್ಷರು ಇಬ್ಬರನ್ನು ಸಮಾಧಾನಪಡಿಸಿ ವಿಷಯ ಹೆಚ್ಚು ಬೆಳೆಸಲು ಅವಕಾಶ ನೀಡಲಿಲ್ಲ. ಇದಕ್ಕೂ ಮೊದಲು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಿ.ಟಿ ರವಿ ಅವರು ಪ್ಲಾಸ್ಟಿಕ್ ಅಕ್ಕಿ ಹಾಗೂ ಮೊಟ್ಟೆ ಸತ್ಯವೇ ಎಂಬುದು ಗೊತ್ತಾಗಬೇಕಾಗಿದೆ. ನ್ಯಾಯಬೆಲೆ ಅಂಗಡಿಯಲ್ಲೇ ಪ್ಲಾಸ್ಟಿಕ್ ದೊರೆತ ಬಗ್ಗೆ ವರದಿಗಳು ಬಂದಿವೆ. ಜನರಲ್ಲಿ ಉಂಟಾಗಿರುವ ಗೊಂದಲವನ್ನು ಸರ್ಕಾರ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ