ವಿಧಾನ  ಪರಿಷತ್ ಸದಸ್ಯರ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗೆ ದೂರು !

Kannada News

09-06-2017 227

ಬೆಂಗಳೂರು:- ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿ ಸ್ವಂತ ಊರುಗಳಿಂದ ಬಂದು ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸಿ ಪ್ರಯಾಣ ಭತ್ಯೆ ಮತ್ತು ಇತರ ಭತ್ಯೆಗಳನ್ನು ಕಾನೂನುಬಾಹಿರವಾಗಿ ಪಡೆಯುತ್ತಿರುವ ಕಾಂಗ್ರೆಸ್ ನ 6 ಮಂದಿ ಹಾಗೂ ಜೆಡಿಎಸ್ ನ ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ಕೂಡಲೇ ವಿಧಾನ ಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ ರವರಿಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಇಂದು ದೂರು ಸಲ್ಲಿಸಿದರು. ಕಾಂಗ್ರೆಸ್ ನ ಅಲ್ಲಂ ವೀರಭದ್ರಪ್ಪ, ರಘು ಆಚಾರ್, ಆರ್.ಬಿ. ತಿಮ್ಮಾಪುರ, ಎನ್.ಎಸ್. ಭೋಸರಾಜ್, ರವಿ, ಎಂ.ಡಿ. ಲಕ್ಷ್ಮಿನಾರಾಯಣ ಹಾಗೂ ಜೆಡಿಎಸ್ ನ ಅಪ್ಪಾಜಿ ಗೌಡ ಮತ್ತು ಪಿ.ಆರ್. ಮನೋಹರ ಅವರು ಅಕ್ರಮವಾಗಿ ವಿಧಾನ ಪರಿಷತ್ ನಿಂದ ಪ್ರಯಾಣ ಭತ್ಯೆಯನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಾಮ ಮಾರ್ಗವನ್ನು ಅನುಸರಿಸಿವೆ ಎಂದು ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ. ಈ ಸದಸ್ಯರು  ತಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿದ್ದರೂ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕನಿಷ್ಟ 7 ದಿನಗಳವರೆಗೆ ನೋಟೀಸ್ ನೀಡಬೇಕು ಎಂಬ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ಅವರು ಮನವಿ ಪತ್ರದಲ್ಲಿ ದೂರಿದ್ದಾರೆ. ಆರ್.ಪಿ.ಐ. ಸೆಕ್ಷನ್ 31 ರ ಪ್ರಕಾರ ಇಂತಹ ಅಕ್ರಮಗಳಿಗೆ ಅವಕಾಶವಿಲ್ಲ. ಒಂದು ವೇಳೆ ಇಂತಹ ಅಕ್ರಮಗಳು ನಡೆದಿದ್ದೇ ಆದಲ್ಲಿ ಕನಿಷ್ಟ ಪಕ್ಷ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸುವ ಅವಕಾಶವಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದರು. ಕಾಂಗ್ರೆಸ್ ನ  6 ಮಂದಿ ಹಾಗೂ ಜೆಡಿಎಸ್ ನ ಇಬ್ಬರು ಸದಸ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರ ಒತ್ತಾಯಿಸಿದರು. ಅಕ್ರಮ ಮತದಾರರ ಪಟ್ಟಿಯಲ್ಲಿರುವ ಅವರ ಹೆಸರನ್ನು ರದ್ದುಗೊಳಿಸಬೇಕು. ಕಾನೂನಿನ ಅನ್ವಯ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಎಂದು ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮನಾಭ ರೆಡ್ಡಿ ಅವರು, ವಿಧಾನ ಪರಿಷತ್ನ 8 ಮಂದಿ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ನ ಸಭಾಪತಿ ಶಂಕರ ಮೂರ್ತಿಯವರಿಗೆ ಈಗಾಗಲೇ ದೂರು ಸಲ್ಲಿಸಿದ್ದೇನೆ. ಆದರೆ ಯಾವುದೇ ಕ್ರಮಕ್ಕೆ ಇನ್ನೂ ಮುಂದಾಗದ ಕಾರಣ ಮುಖ್ಯ ಚುನಾವಣಾಧಿಕಾರಿಗಳಿಗೂ ದೂರು ನೀಡಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷದ ಕೆಲವರು ಈ ಪ್ರಕರಣವನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ರಾಜ್ಯದ ಕಾನೂನು ಪಂಡಿತರು ಸರಿಯಾದ ದಿಕ್ಕಿನಲ್ಲಿ ಪರಿಶೀಲಿಸಬೇಕು. ಆಗ ವಿಧಾನ ಪರಿಷತ್ ಸದಸ್ಯರು ಮಾಡಿರುವ ತಪ್ಪು ಏನೆಂಬುದು ಗೊತ್ತಾಗಲಿದೆ ಎಂದು ಹೇಳಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ