ಆನಂದ್‍ಸಿಂಗ್ ಬ್ಲಾಕ್‍ಮೇಲ್ ತಂತ್ರವನ್ನು ಅನುಸರಿಸಿದ್ದಾರೆಯೇ

Is Anand Singh black mailing by giving resignation

01-07-2019

ಬೆಂಗಳೂರು- ಜಿಂದಾಲ್ ಕಂಪೆನಿಗೆ ಭೂಮಿ ಪರಬಾರೆ ಮಾಡಿದ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆನಂದ್‍ಸಿಂಗ್ ಬ್ಲಾಕ್‍ಮೇಲ್ ತಂತ್ರವನ್ನು ಅನುಸರಿಸಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಮೂಲತಃ ಬಿಜೆಪಿಯವರಾಗಿದ್ದ ಆನಂದ್‍ಸಿಂಗ್, ನಾಗೇಂದ್ರ ಹಾಗೂ ಗಣೇಶ್ ಅವರು ಕಾಂಗ್ರೆಸ್‍ಗೆ ಬಂದು ಇಲ್ಲಿ ಬಿ ಫಾರಂ ಪಡೆದು  ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಆನಂದ್‍ಸಿಂಗ್ ಅವರ ಮೇಲೆ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟ ಪ್ರಕರಣಗಳಿದ್ದು, ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ. ಕಳೆದ ವರ್ಷವೇ ಬಿಜೆಪಿ ನಾಯಕರು ಸಿಬಿಐ ಪ್ರಕರಣವನ್ನು ಮುಂದಿಟ್ಟುಕೊಂಡು ಆನಂದ್‍ಸಿಂಗ್ ಅವರನ್ನು ಹೆದರಿಸಿ ಆಪರೇಷನ್ ಕಮಲಕ್ಕೆ ಸಿಲುಕಿಸಿದ್ದರು.

ಮಾಜಿ ಸಚಿವ ರಮೇಶ್‍ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದಿದ್ದ ಕಾರ್ಯಾಚರಣೆ ಕೊನೆ ಹಂತದಲ್ಲಿ ವಿಫಲವಾದಾಗ  ಆನಂದ್‍ಸಿಂಗ್ ಕೂಡ ಸಮ್ಮಿಶ್ರ ಸರ್ಕಾರದಲ್ಲೇ ಉಳಿದುಕೊಂಡಿದ್ದರು.

ಬೇರೆಲ್ಲಾ ಶಾಸಕರಿಗಿಂತಲೂ ಆನಂದ್‍ಸಿಂಗ್ ಬಿಜೆಪಿ ಪಾಲಿಗೆ ಸುಲಭದ ತುತ್ತಾಗಿದ್ದು,  ಹೇಳಿದಂತೆ ಕೇಳದೇ ಇದ್ದರೆ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೂಲಕ ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಂಡು ಆನಂದ್‍ಸಿಂಗ್ ವಿರುದ್ಧ ಕಾನೂನಿನ ಕತ್ತಿಯನ್ನು ಪ್ರಯೋಗಿಸಲಿದ್ದಾರೆ. ಹೀಗಾಗಿ ಆನಂದ್‍ಸಿಂಗ್ ಸದಾ ಕಾಲ ಅಡ್ಡಕತ್ತರಿಗೆ ಸಿಲುಕಿದಂತೆ ಇಬ್ಬಂದಿ ಸ್ಥಿತಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ವಿಷಯ ಬಂದಾಗ ಕಾಂಗ್ರೆಸ್ ನಾಯಕರು ಆನಂದ್‍ಸಿಂಗ್ ಅವರ ಬೆಂಬಲಕ್ಕೆ ನಿಲ್ಲಲು ಹಿಂದೇಟು ಹಾಕುತ್ತಾರೆ. ಆನಂದ್‍ಸಿಂಗ್ ಅವರು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ಅದಕ್ಕೆ ನಾವು ಹೊಣೆಯಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಅತ್ತ ಬಿಜೆಪಿ ಕಾನೂನಿನ ಕುಣಿಕೆಯನ್ನು ಹಿಡಿದು ಕುತ್ತಿಗೆ ಬೀರುವ ಮೂಲಕ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ರಾಜಕೀಯವಾಗಿ ಯಾವುದೋ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವ ಆನಂದ್‍ಸಿಂಗ್ ಕೊಟ್ಟಾಗೂ ಇರಬೇಕು, ಅಂಗೀಕಾರವೂ ಆಗಬಾರದು ಎಂಬಂತ ಅತಂತ್ರ ಸ್ಥಿತಿಯಲ್ಲಿ ರಾಜೀನಾಮೆ ನೀಡಿದ್ದಾರೆ.

ಜಿಂದಾಲ್ ಕಂಪೆನಿಗೆ ಬಳ್ಳಾರಿ-ಹೊಸಪೇಟೆ ಬಳಿ 3666 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ ಪ್ರಕರಣವನ್ನು ಮುಂದಿಟ್ಟುಕೊಂಡು ಬಹಿರಂಗವಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಆನಂದ್‍ಸಿಂಗ್. ಈಗ ಅದೇ ವಿಷಯವನ್ನು ಮುಂದಿಟ್ಟುಕೊಂಡು ರಾಜೀನಾಮೆಯ ಅಸ್ತ್ರ ಪ್ರಯೋಗಿಸಿದ್ದಾರೆ.

ರಾಜೀನಾಮೆಯನ್ನು ನೇರವಾಗಿ ಸಭಾಧ್ಯಕ್ಷ ರಮೇಶ್‍ಕುಮಾರ್‍ಗೆ ನೀಡಿಲ್ಲ. ಅವರ  ಆಪ್ತ ಸಹಾಯಕರ ಕೈಗೆ ಕೊಟ್ಟಿದ್ದಾರೆ ಎನ್ನಲಾಗಿದೆ. ಕಾನೂನಿನ ಪ್ರಕಾರ ನೇರವಾಗಿ ರಾಜೀನಾಮೆ ನೀಡದೇ ಇದ್ದರೆ ಅದು ಅಂಗೀಕಾರಗೊಳ್ಳುವುದಿಲ್ಲ.

ಹೀಗಾಗಿ ಆನಂದ್‍ಸಿಂಗ್ ಬಿಜೆಪಿ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟಂತೆಯೂ ಆಗಿದೆ. ಇತ್ತ ಅದು ಅಂಗೀಕಾರಗೊಳ್ಳದಂತಹ ಸ್ಥಿತಿಯೂ ಇದೆ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಮತ್ತೆ ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ಸಮ್ಮಿಶ್ರ ಸರ್ಕಾರ.

ಜಿಂದಾಲ್ ಕಂಪೆನಿಗೆ ಭೂಮಿ ನೀಡಲೇಬೇಕೆಂದು ಕಾಂಗ್ರೆಸ್‍ನ ಸಚಿವರಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ವಕಾಲತ್ತು ವಹಿಸಿದ್ದಾರೆ.

ಶಾಸಕರಾದ ಎಚ್.ಕೆ.ಪಾಟೀಲ್, ಅನಿಲ್‍ಲಾಡ್ ಮತ್ತಿತರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆನಂದ್‍ಸಿಂಗ್ ಅವರು ಬಾಯಿಮಾತಿನ ವಿರೋಧ ವ್ಯಕ್ತಪಡಿಸದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.

ಆಪರೇಷನ್ ಕಮಲದ ಹೆಸರಿನಲ್ಲಿಯೇ ರಾಜೀನಾಮೆ ನೀಡಿದರೂ ಅದು ಪ್ರಮುಖವಾಗಿಲ್ಲ. ಜಿಂದಾಲ್ ಪ್ರಕರಣವೇ ಬಹು ಮುಖ್ಯವಾಗಿದ್ದು, ಈಗ ಸರ್ಕಾರ ಜಿಂದಾಲ್‍ಗೆ ಭೂಮಿ ನೀಡಿದ್ದೇ ಆದರೆ ಆನಂದ್‍ಸಿಂಗ್ ಮತ್ತೊಮ್ಮೆ ಸ್ಪೀಕರ್ ಅವರನ್ನು ನೇರವಾಗಿ ಭೇಟಿ ಮಾಡಿ ರಾಜೀನಾಮೆ ನೀಡುವ ಮೂಲಕ ಪಕ್ಷದಿಂದ ಹೊರ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆನಂದ್‍ಸಿಂಗ್ ಅವರ ಜತೆ ಇನ್ನಷ್ಟು ಶಾಸಕರು ರಾಜೀನಾಮೆ ಕೊಟ್ಟರೆ ಸರ್ಕಾರ ಪತನವಾಗಲಿದೆ. ಹೀಗಾಗಿ ಜಿಂದಾಲ್ ಪ್ರಕರಣ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕಂಟಕಪ್ರಾಯವಾಗಲಿದೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.
 


ಸಂಬಂಧಿತ ಟ್ಯಾಗ್ಗಳು

Anand Singh Anand Singh resigns Congress JDS coalition BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ