ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ: ಬಿ.ಎಸ್.ವೈ

we will not let election to held when we have 105 seats: B S Yediyurappa

01-07-2019

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿ ಬಿದ್ದರೆ ಯಾವ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ.ಬದಲಿಗೆ ನಾವೇ ಸರ್ಕಾರ ರಚಿಸುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಇಪ್ಪತ್ತರಷ್ಟು ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಮಾಹಿತಿ ಇದೆ.ಆದರೆ ಇಂತಹ ಬೆಳವಣಿಗೆ ನಡೆದರೆ ಸುಮ್ಮನೆ ನೋಡುತ್ತಾ ಕೂರಲು ನಾವು ಸನ್ಯಾಸಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಸಕ ಆನಂದ್‍ಸಿಂಗ್ ರಾಜೀನಾಮೆ ಪ್ರಕರಣಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವಿಧಾನಸೌಧದ ತಮ್ಮ ಕೊಠಡಿಯಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಅವರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. 105 ಶಾಸಕರನ್ನು ಹೊಂದಿರುವ ನಾವು ಸಮ್ಮಿಶ್ರ ಸರ್ಕಾರ ಅಸ್ಥಿರಗೊಂಡರೆ ಏನು ಮಾಡಬೇಕು ಎಂಬುದನ್ನು ಕಾದು ನೋಡುತ್ತೇವೆ. ಆನಂದ್‍ಸಿಂಗ್ ರಾಜೀನಾಮೆ ನೀಡಿರುವುದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ನಾನೂ ಕೂಡ ಮಾಧ್ಯಮಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.

ಸರ್ಕಾರದ ನಡವಳಿಕೆಯಿಂದ ಬೇಸತ್ತಿರುವ ಅನೇಕ ಶಾಸಕರು ರಾಜೀನಾಮೆ ನೀಡಬಹುದು. ಮುಂದೆ ಏನಾಗುತ್ತದೋ ಎಂಬುದನ್ನು ನಾವೂ ಕೂಡ ಗಮನಿಸುತ್ತಿದ್ದೇವೆ. ನಮ್ಮಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ  ನಡೆಯುವುದಿಲ್ಲ. ಹಾಗೆಂದು ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಉರುಳಿಸಿದರೆ ನಾವು ಸುಮ್ಮನಿರಲು ಸಾಧ್ಯವೇ ಎಂದು ಮರುಪ್ರಶ್ನಿಸಿದರು.

ಜನರ ಪಾಲಿಗೆ ಈ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಒಂದು ಕಡೆ ಮಳೆ ಬಾರದೆ ರೈತ ಕಂಗಾಲಾಗಿದ್ದಾನೆ. ಅನೇಕ ಕಡೆ ಕುಡಿಯುವ ನೀರಿಗೂ ಹಾಹಾಕಾರವಿದೆ. ಜಾನುವಾರುಗಳಿಗೆ ಮೇವಿಲ್ಲ. ಕೃಷಿ ಚಟುವಟಿಕೆಗಳು ನಡೆಸಲು ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಯಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ರೋಮ್‍ನಗರ  ಹೊತ್ತಿ  ಉರಿಯುವಾಗ  ನೀರೋ ದೊರೆ ಪಿಟೀಲು ಕುಯ್ಯುತ್ತಿದ್ದ ಎಂಬಂತೆ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕ ಪ್ರವಾಸ ನಡೆಸಬೇಕಾದ ಅಗತ್ಯವಾದರೂ ಏನಿತ್ತು ? ವಿದೇಶಿ ಪ್ರವಾಸ ಕೈಗೊಳ್ಳಬೇಕಾದರೂ ಅದಕ್ಕೆ ತನ್ನದೇ ಆದ ರೀತಿ ನೀತಿ ಇವೆ ಎಂದು ವಾಗ್ದಾಳಿ ನಡೆಸಿದರು.

590 ಹೋಬಳಿಗಳ ಪೈಕಿ 197 ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. 143 ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ. 74.69 ಹೆಕ್ಟೇರ್ ಪ್ರದೇಶಗಳ ಪೈಕಿ ಕೇವಲ 16.25 ಹೆಕ್ಟೇರ್‍ನಲ್ಲಿ ಬಿತ್ತನೆ ಮಾಡಲಾಗಿದೆ. ಮುಂಜಾಗ್ರತೆಯಾಗಿ ಸರ್ಕಾರ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪೆಂಡಿಂಗ್ ಸರ್ಕಾರ:

ಅಭಿವೃದ್ಧಿ ಮರೆತ ರೈತ ವಿರೋಧಿ, ಜನ ವಿರೋಧಿ ಸರ್ಕಾರ ಇದಾಗಿದೆ. ಅನೇಕ ಇಲಾಖೆಗಳಲ್ಲಿ ಬಾಕಿ ಇರುವ ಹಣವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದೊಂದು ಪೆಂಡಿಂಗ್ ಸರ್ಕಾರ ಎಂದು ಯಡಿಯೂರಪ್ಪ ದೂರಿದರು.

ಸಣ್ಣ ನೀರಾವರಿ, ಬೃಹತ್ ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ 10ಸಾವಿರ ಕೋಟಿ ರೂ. ಹಾಗೇ  ಉಳಿಸಿಕೊಳ್ಳಲಾಗಿದೆ. ಕಮಿಷನ್‍ಗಾಗಿ  ಕಾಯುತ್ತಾ ಕುಳಿತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ.  ಆದರೆ,   ಮುಖ್ಯಮಂತ್ರಿಗಳು ರಾಜ್ಯದ ಖಜಾನೆ ಭರ್ತಿಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಉತ್ತರಿಸಿದರು.

ಹಾಲು ಮಾರಾಟ ಮಾಡುವವರಿಗೆ ಪ್ರೊತ್ಸಾಹ ಧನ ನೀಡುತ್ತಿಲ್ಲ, ವೃದ್ಧಾಪ್ಯ, ವಿಕಲಚೇತನ ಹಾಗೂ ವಿಧವಾ ವೇತನವನ್ನು ಐದು ತಿಂಗಳಿನಿಂದ ನೀಡುತ್ತಿಲ್ಲ. ಬಿಬಿಎಂಪಿಯಲ್ಲಿ 13 ಸಾವಿರ ಕೋಟಿ ಬಿಲ್ ಬಾಕಿ ಇದೆ. ಈ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ ಎಂದು ಆಪಾದಿಸಿದರು.

ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಎಲ್ಲರಿಗೂ ಸುಳ್ಳು ಹೇಳಿದ್ದರಿಂದ ಜೆಡಿಎಸ್‍ಗೆ 38 ಸ್ಥಾನಕೊಟ್ಟರು. ಇಲ್ಲದಿದ್ದರೆ 20 ಸ್ಥಾನವೂ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸರ್ಕಾರಕ್ಕೆ ಸೇರಿದ ಕಂದಾಯ ಮತ್ತು ಗೋಮಾಳ ಜಮೀನನ್ನು ಹಿಂಪಡೆಯಲು ಭೂ ಕಬಳಿಕೆ ಕಾನೂನನ್ನು ಜಾರಿ ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಕೆಲವು ಕಡೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೂ ಕೈ ಹಾಕಿದೆ. 30-40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಅಂತಹವರನ್ನು  ಒಕ್ಕಲೆಬ್ಬಿಸುವುದು ಬೇಡ ಎಂದು ಆಗ್ರಹಿಸಿದರು.

ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಎರಡನೇ ಹಂತದ ಪ್ರವಾಸವನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಾರಂಭಿಸಲಿದ್ದೇವೆ. ಮುಂಬರುವ ಅಧಿವೇಶನದಲ್ಲಿ ಯಾವ ರೀತಿ  ಸರ್ಕಾರದ ಗಮನ ಸೆಳೆಯಬೇಕು ಎಂಬುದರ ಬಗ್ಗೆ ಶಾಸಕರ ಜತೆ ಚರ್ಚೆ ನಡೆಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ, ಶಾಸಕ ಎಸ್.ಸುರೇಶ್‍ಕುಮಾರ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಜೀವರಾಜ್ ಮತ್ತಿತರರಿದ್ದರು.


ಸಂಬಂಧಿತ ಟ್ಯಾಗ್ಗಳು

BS Yediyurappa BJP Anand Singh HD Kumaraswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ