'ಜೀವ ರಕ್ಷಣೆಯೇ ವೈದ್ಯ ವೃತ್ತಿಯ ಆದ್ಯ ಕರ್ತವ್ಯವಾಗಬೇಕು'

doctor

01-07-2019

ಬೆಂಗಳೂರು: ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿಯ ಆದ್ಯ ಕರ್ತವ್ಯವಾಗಬೇಕು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಕೆಆರ್ ರಸ್ತೆಯ ಬಿಎಂಸಿ ಮತ್ತು ಆರ್ ಐ ಅಲ್ಯುಮ್ನಿ ಅಸೋಸಿಯೇಷನ್ ಭವನದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಕರ್ನಾಟಕ ಶಾಖೆ) ಆಯೋಜಿಸಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ತುಂಬಾ ಪವಿತ್ರವಾಗಿದೆ ಎಂದರು.

ವೈದ್ಯ ಲೋಕ ಮಹಾ ಪರ್ವತ ಇದ್ದಂತೆ. ಕೋಟ್ಯಂತರ ರೋಗಿಗಳ ಆರೋಗ್ಯ ಕಾಳಜಿಯಲ್ಲಿ ತೊಡಗಿಕೊಂಡಿರುವ ವೈದ್ಯರು ರೋಗಿಗಳ ಜೀವ ಉಳಿಸುವ ಕಾರ್ಯಾದಲ್ಲಿ ತೊಡಗಿರುವದು ಪುಣ್ಯದ ಕೆಲಸ. ಜೊತೆಗೆ, ನಾವು ಸಹ ವೈದ್ಯರ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಿದೆ ಎಂದು ತಿಳಿಸಿದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಡಾ.ಅನ್ನದಾನಿ ಎಂ.ಮೇಟಿ ಮಾತನಾಡಿ, ಇಂದು ನಡೆಯುತ್ತಿರುವುದು ವಿಶ್ವ ವೈದ್ಯರ ದಿನಾಚರಣೆ ಅಲ್ಲ. ಇದು ರಾಷ್ಟ್ರೀಯ ವೈದ್ಯರ ದಿನಾಚರಣೆ. ಒಂದೊಂದು ದೇಶದಲ್ಲಿ ಒಂದೊಂದು ದಿನ ವೈದ್ಯರ ದಿನಾಚರಣೆ ನಡೆಯುತ್ತದೆ. ನಮ್ಮ ದೇಶದಲ್ಲಿ ಡಾ.ಬಿ.ಸಿ.ರಾಯ್ ಜನ್ಮ ದಿನಾಚರಣೆಯನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಸ್ವತಂತ್ರ ಹೋರಾಟಗಾರರಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಬಿ.ಸಿ.ರಾಯ್ ವೈದ್ಯ ವೃತ್ತಿಗೆ ಭೂಷಣ ಇದ್ದಂತೆ. ಇವರು ಹುಟ್ಟಿದ್ದು ಮತ್ತು ನಿಧನ ಹೊಂದಿದ್ದು ಎರಡೂ ಜುಲೈ 1. ಅಪರೂಪದಲ್ಲಿ ಅಪರೂಪ ಎನಿಸಿದ ಇವರಿಗೆ ಗೌರವ ಸಲ್ಲಿಸಲು ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಎಂಸಿ ನಿರ್ದೇಶಕ  ಡಾ.ಎಚ್.ಎಸ್.ಸತೀಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

Shivananda Patil Health minister Doctor's day Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ