ಬಿಡಿಎ ಎಂಜಿನಿಯರ್ ಮನೆ ಮೇಲೆ ಎಸ್‍ಐಟಿ ದಾಳಿ

SIT raids BDA executive engineer

01-07-2019

ಬೆಂಗಳೂರು: ಐಎಂಎ ಸಮೂಹ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯನಿರ್ವಾಹಕ ಅಭಿಯಂತರ (ಎಇ) ಪಿ.ಡಿ. ಕುಮಾರ್ ಮನೆ ಮೇಲೆ ವಿಶೇಷ ತನಿಖಾ ತಂಡ (ಎಸ್‍ಐಟಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜಯನಗರದ 5ನೇ ಬ್ಲಾಕ್‍ನಲ್ಲಿರುವ ಕುಮಾರ್ ಮನೆ ಮೇಲೆ ಬೆಳಿಗ್ಗೆ 6.30 ರಿಂದ ದಾಳಿ ನಡೆಸಿ, ಶೋಧ ನಡೆಸಿರುವ ಅಧಿಕಾರಿಗಳು, ಕಾರುಗಳು, ಮೊಬೈಲ್ ಹಾಗೂ  ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಐಎಂಎ ವಂಚಕ ಮನ್ಸೂರ್ ಖಾನ್ ಪರಾರಿಯಾಗುವ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಕುಮಾರ್ ಹೆಸರು ಪ್ರಸ್ತಾಪಿಸಿ ಐದು ಕೋಟಿ ರೂ. ನೀಡಿರುವುದಾಗಿ ಹೇಳಿದ್ದ. ಅದನ್ನು ಆಧರಿಸಿ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಪ್ರಕರಣದಲ್ಲಿ ಕುಮಾರ್ ಭಾಗಿಯಾಗಿರುವುದು ಪತ್ತೆಯಾಗಿರುವುದರಿಂದ ದಾಳಿ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಕುಮಾರ್ ಮನೆಯಲ್ಲಿ ನಗದು ಪತ್ತೆಯಾಗದಿದ್ದರೂ, ವಾಹನಗಳು, ದಾಖಲಾತಿಗಳು ದೊರೆತಿದ್ದು, ದಾಖಲಾತಿಗಳಲ್ಲಿ ಅಕ್ರಮ ವ್ಯವಹಾರದ ಹಣಕಾಸಿನ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದನ್ನು ಆಧರಿಸಿ ತನಿಖೆ ತೀವ್ರಗೊಳಿಸಲಾಗುವುದು ಎಂದರು.

ಮನ್ಸೂರ್ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಹೇಳಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬಗ್ಗೆ ತನಿಖೆಯಲ್ಲಿ ಮಾಹಿತಿ ಕಂಡುಬಂದರೆ, ಅವರನ್ನೂ ಕೂಡ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಭ್ರಷ್ಟಾಚಾರದ ಸಂಬಂಧ ಪಿ.ಡಿ. ಕುಮಾರ್, ಕಚೇರಿ ಹಾಗೂ ಮನೆಯ ಮೇಲೆ ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಗಳನ್ನು ಪತ್ತೆಹಚ್ಚಿದ್ದರು.


ಸಂಬಂಧಿತ ಟ್ಯಾಗ್ಗಳು

BDA PD Kumar SIT Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ