`ಮರಳು ಭಾಗ್ಯ' ಜಾರಿಗೆ ತನ್ನಿ ಎನ್ನುವ ಹೇಳಿಕೆಗೆ ವಿಧಾನ ಪರಿಷತ್‍ನಲ್ಲಿ ಜಟಾಪಟಿ !

Kannada News

09-06-2017

ಬೆಂಗಳೂರು:- ರಾಜ್ಯದ್ಯಂತ ಮರಳಿಗೆ ಏಕರೂಪ ದರ ನಿಗದಿ ಮಾಡುವುದೂ ಸೇರಿದಂತೆ ಜನಸಾಮಾನ್ಯರಿಗೆ ಮರಳು ಸಿಗುವಂತಾಗಲು `ಮರಳು ಭಾಗ್ಯ' ಜಾರಿಗೆ ತನ್ನಿ ಎನ್ನುವ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆ ವಿಧಾನ ಪರಿಷತ್‍ನಲ್ಲಿ ಜಟಾಪಟಿ ಹಾಗೂ ಮಾತಿನ ಚಕಮಕಿಗೆ ಕಾರಣವಾಗಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು. ಬಿಜೆಪಿ ಸದಸ್ಯ ಭಾನುಪ್ರಕಾಶ್ ಪ್ರಶ್ನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಉತ್ತರ ನೀಡುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ, ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಮರಳು ಲೂಟಿಯಾಗುತ್ತಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಲೂಟಿ ಮಾಡುವವರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರಿಗೆ ಮರಳು ಸಿಗದಂತಾಗಿದೆ. ಮರಳಿಗೆ ರಾಜ್ಯಾದ್ಯಂತ ಏಕರೂಪ ದರ ನಿಗದಿ ಮಾಡಿ, ಮರಳು ಮಾಫಿಯಾ ಜಾರಿಗೆ ತನ್ನಿ ಎಂದು ಈಶ್ವರಪ್ಪ ಒತ್ತಾಯಿಸುತ್ತಿದ್ದು, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುವಂತಾಯಿತು. ಆಗ ವಿನಯ್ ಕುಲಕರ್ಣಿ ಪ್ರತಿಪಕ್ಷದ ನಾಯಕರು ಹೇಳಿದರೆ ಮರಳು ಭಾಗ್ಯ ತರಲೂ ಸರ್ಕಾರ ಸಿದ್ಧವಿದೆ. ಆಶ್ರಯಮನೆ, ಸರ್ಕಾರಿ ಕೆಲಸಗಳಿಗೆ ಪ್ರತ್ಯೇಕ ಮರಳು ಬ್ಲಾಕ್ ಗಳನ್ನು ನಿಗದಿ ಮಾಡಲಾಗಿದೆ. ಇಂತಹ ನಿಯಮ ಮುಂಚೆ ಇರಲಿಲ್ಲ ಎಂದು ಹೇಳಿದರು. ಆಗಲೂ ಪಟ್ಟು ಬಿಡದ ಧರಣಿ ನಿರತ ಈಶ್ವರಪ್ಪ, ರಾಜ್ಯಾದ್ಯಂತ ಮರಳಿಗೆ ಏಕರೂಪ ದರ ನಿಗದಿಪಡಿಸಿ ಎಂದು ಒತ್ತಾಯಿಸಿದರು. ಅದಕ್ಕೆ ಉತ್ತರಿಸಿದ ಸಚಿವ ಕುಲಕರ್ಣಿ ರಾಜ್ಯಾದ್ಯಂತ 322 ಮರಳು ಬ್ಲಾಕ್ ಗಳನ್ನು ಗುರುತಿಸಿದ್ದು, ಅದರಲ್ಲಿ 222 ಮರಳು ಬ್ಲಾಕ್ ಗಳನ್ನು ಟೆಂಡರ್ ಕರೆಯಲಾಗಿದೆ. ಅವುಗಳು ಇನ್ನು 15 ದಿನಗಳೊಳಗಾಗಿ ಕಾರ್ಯನಿರ್ವಹಿಸಲಿವೆ. ಇದರಿಂದ ಮರಳು ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು. ಈ ಹಂತದಲ್ಲಿ ಈಶ್ವರಪ್ಪ ಏರಿದ ದನಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಮರಳು ಲೂಟಿಕೋರರು ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಆಗ ಮಧ್ಯ ಪ್ರವೇಶಿಸಿ ಸಭಾ ನಾಯಕ ಪರಮೇಶ್ವರ್ ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿಯಮಗಳನ್ನು ಸರಳೀಕರಣ ಮಾಡುವುದಾಗಿ ಸಚಿವರು ಹೇಳಿದ್ದರೂ ಧರಣಿ ಮಾಡುವುದು ಸರಿಯಲ್ಲ ಎಂದು ಹೇಳಿದರು. ರಾಜ್ಯಾದ್ಯಂತ ತಲೆದೋರಿರುವ ಮರಳು ಸಮಸ್ಯೆಗೆ ಇನ್ನೊಂದು ತಿಂಗಳೊಳಗಾಗಿ ಪರಿಹಾರ ಕಂಡುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು. ಸಚಿವರ ಭರವಸೆಯ ಹಿನ್ನಲೆಯಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಧರಣಿಯನ್ನು ವಾಪಸ್ ಪಡೆಯಲಾಯಿತು. ಇದಕ್ಕೂ ಮುನ್ನ ಮಾತನಾಡಿದ ಸಚಿವ ವಿನಯ್ ಕುಲಕರ್ಣಿ, ರಾಜ್ಯಾದ್ಯಂತ ಮರಳು ಸಮಸ್ಯೆ ಇದ್ದುದ್ದು ನಿಜ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ನಿಯಮಗಳನ್ನು ಸರಳೀಕರಣ ಮಾಡಲಾಗುತ್ತಿದೆ.ದಾವಣಗೆರೆಯಲ್ಲಿ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಾವೇರಿ, ಗದಗ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು. ಕಳೆದ 3 ವರ್ಷಗಳಿಂದ ಮರಳು ಗಣಿಗಾರಿಕೆಯಿಂದ 532 ಕೋಟಿ ರೂ. ಸಂಗ್ರಹವಾಗಿದ್ದು, 35.61 ಕೋಟಿ ದಂಡ ವಿಧಿಸಲಾಗಿದೆ. ಅಕ್ರಮ ಮರಳು ಸಾಗಾಣಿಕೆದಾರರ ವಿರುದ್ಧ ಕಳೆದ 3 ವರ್ಷಗಳಲ್ಲಿ 7861 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ