ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜಿನಾಮೆ!

Anand Singh resigned !

01-07-2019

ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ಬಳ್ಳಾರಿ ಜಿಲ್ಲೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್‍ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಮರ್ಮಾಘಾತ ನೀಡಿದ್ದಾರೆ.

ಈ ಮೂಲಕ ಕಳೆದ ಹಲವು ದಿನಗಳಿಂದ ತೆರಮರೆಗೆ ಸೆರೆದಿದ್ದ ಆಪರೇಷನ್ ಕಮಲ ಮತ್ತೆ ಮುಂಚೂಣಿಗೆ ಬಂದಿದ್ದು, ದೋಸ್ತಿ ಸರ್ಕಾರದ ಭವಿಷ್ಯ ತೂಗೂಯ್ಯಾಲೆಯಾಗಿದೆ. ಇಂದು ಬೆಳಗ್ಗೆ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರ ದೊಮ್ಮಲೂರಿನ ನಿವಾಸಕ್ಕೆ ತೆರಳಿದ ಆನಂದ್‍ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಗೆ ಸ್ಪಷ್ಟ ಕಾರಣವನ್ನು ನೀಡಿಲ್ಲವಾದರೂ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್‍ಗೆ ಮನವಿ ಮಾಡಿದ್ದಾರೆ

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆನಂದ್‍ಸಿಂಗ್ ಒಂದಿಲ್ಲೊಂದು ಕಾರಣಗಳಿಂದ ಅಸಮಾಧಾನಗೊಂಡಿದ್ದರು. ಈ ಹಿಂದೆ ಆಪರೇಷನ್ ಕಮಲದಲ್ಲಿ ಆನಂದ್‍ಸಿಂಗ್ ಹೆಸರು ಕೇಳಿ ಬಂದಿತ್ತಾದರೂ ಕೆಲವು ಕಾರಣಗಳಿಂದ ಅದು ಅಷ್ಟೇ ವೇಗವಾಗಿ ತೆರೆಮರೆಗೆ ಸರಿದುಕೊಂಡಿತ್ತು.

ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ಕಂಪ್ಲಿ ಶಾಸಕ ಜೆ.ಗಣೇಶ್ ಆನಂದ್‍ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಈ ಅಮಾನತು ಪ್ರಕರಣವನ್ನು ಹಿಂಪಡೆದಿದ್ದರಿಂದ ಅಸಮಾಧಾನಗೊಂಡಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಆನಂದ್‍ಸಿಂಗ್, ರೆಸಾರ್ಟ್‍ನಲ್ಲಿ ಕಂಪ್ಲಿ ಶಾಸಕ ಜೆ.ಗಣೇಶ್ ಮೇಲೆ ಹಲ್ಲೆ ಮಾಡಿದ ಬಳಿಕ ರಾಜಕೀಯವಾಗಿ ತೆರೆಮರೆಗೆ ಸೆರೆದಿದ್ದರು. ಕಾಂಗ್ರೆಸ್‍ನಲ್ಲಿ ಅಸಮಾಧಾನಗೊಂಡಿರುವ ಶಾಸಕರ ಪೈಕಿ ಇವರ ಹೆಸರು ಕೇಳಿ ಬಂದಿರಲಿಲ್ಲ. ಬಹುತೇಕ ಕ್ಷೇತ್ರದಲ್ಲೇ ಇದ್ದುಕೊಂಡು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

MLA Bellary Anand Singh Resign


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ