ರೈತರಿಗೆ 1 ರೂ. ಪರಿಹಾರ ನೀಡುತ್ತೀರಲ್ಲ, ರೈತರೇನು ಭಿಕ್ಷುಕರೆ !

Kannada News

09-06-2017

ಬೆಂಗಳೂರು:- ಬೆಳೆಹಾನಿಗೆ ರೈತರಿಗೆ 1 ರೂ. ಪರಿಹಾರ ನೀಡುತ್ತೀರಲ್ಲ, ರೈತರೇನು ಭಿಕ್ಷುಕರೆ, ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿಂದು ಹರಿಹಾಯ್ದರು. ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಬರದಿಂದ ಬೆಳೆ ನಷ್ಟವಾದ ರೈತರ ಅಕೌಂಟಿಗೆ 1 ರೂ., 5 ರೂ.ಗಳನ್ನು ಕಂದಾಯ ಇಲಾಖೆ ಜಮಾ ಮಾಡಿದೆ. ರೈತರನ್ನು ಏನೆಂದು ಕೊಂಡಿದ್ದೀರಿ, ರೈತರಿಗೆ ಅಪಮಾನ ಮಾಡುತ್ತಿದ್ದೀರಾ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 1 ರೂ. ನೀಡುವುದು ಇದೆಂತ ನ್ಯಾಯ, ಸರ್ಕಾರಕ್ಕೆ ನಾಚಿಕೆಯಾಗಬೇಕು, ಪರಿಹಾರವನ್ನು ಸರಿಯಾಗಿ ಕೊಡಿ, ಇಲ್ಲದಿದ್ದರೆ ಪರಿಹಾರವನ್ನೇ ಕೊಡಬೇಡಿ. ರೈತರೇ ಬೇಕಾದರೆ 10 ರೂ. ನಿಮಗೆ ಕೊಟ್ಟುಬಿಡುತ್ತಾರೆ. ಆದರೆ, 1 ರೂ. ನೀಡಿ ರೈತರನ್ನು ಅಪಮಾನ ಮಾಡಬೇಡಿ ಎಂದು ಕಿಡಿಕಾರಿದರು. ಇಂದು ಧಾರವಾಡ, ಹಾಸನ ಕಡೆಯ ಹಲವು ರೈತರು ದೂರವಾಣಿ ಮೂಲಕ ನನಗೆ ಈ ಬಗ್ಗೆ ಮಾತನಾಡಿದ್ದಾರೆ, ಏನು 1 ರೂ. ಪರಿಹಾರ ನೀಡುತ್ತೀರಿ, ಇದು ಆಡಳಿತ ನಡೆಸುವ ಪರಿಯೇ ಎಂದು ಸಿಟ್ಟಿನಿಂದ ನುಡಿದರು. ವಿರೋಧ ಪಕ್ಷದ ನಾಯಕರ ಮಾತಿಗೆ ಪ್ರತಿಕ್ರಿಯಿಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಈ ವಿಚಾರ ನನಗೂ ಆಶ್ಚರ್ಯ ತಂದಿದೆ. ಈ ಬಗ್ಗೆ ಮಾಹಿತಿ ಇಲ್ಲ, ವರದಿ ತರಿಸಿಕೊಂಡು ಉತ್ತರ ನೀಡುವುದಾಗಿ ಹೇಳಿ, ಈ ವಿಷಯಕ್ಕೆ ಮಂಗಳ ಹಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ