ಜುಲೈ 12 ರಿಂದ 26 ರವರೆಗೆ ವಿಧಾನಮಂಡಲ ಅಧಿವೇಶನ: ಸಚಿವ ಕೃಷ್ಣಬೈರೇಗೌಡ

Karnataka assembly both houses session starting from July 12 to 26

28-06-2019

ಬೆಂಗಳೂರು, ಜೂನ್ 28 : ಜುಲೈ 12 ರಿಂದ 26 ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಕೃಷ್ಣಬೈರೇಗೌಡ ಹೇಳಿದ್ದಾರೆ.

ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಈ ಕೆಳಕಂಡಂತಿದೆ.

ಬೆಳೆ ಸಮೀಕ್ಷೆ :

• ಇದುವರೆಗೂ  ರಾಜ್ಯದಲ್ಲಿ ಯಾವ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ ಎನ್ನುವ ಸರಿಯಾದ ಮಾಹಿತಿ ಇರುತ್ತಿರಲಿಲ್ಲ, ಬರ ಅಥವಾ ಅತಿವೃಷ್ಟಿಯಾದಾಗ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಿದಾಗ ವ್ಯತ್ಯಾಸವಾಗುತ್ತಿತ್ತು. ಆದ್ದರಿಂದ ನಿಖರವಾದ ಬೆಳೆ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ರಾಜ್ಯದಲ್ಲಿನ 2 ಕೋಟಿ 20 ಲಕ್ಷ ಪ್ಲಾಟ್‍ಗಳಲ್ಲಿ ಯಾವ ಬೆಳೆ ಇದೆ ಎನ್ನುವ ಮಾಹಿತಿ ಪಡೆಯಬಹುದು. ಈ ಉದ್ದೇಶಕ್ಕೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಯುವಕ ಯುವತಿಯರನ್ನು ಬಳಸಿಕೊಳ್ಳುತ್ತೇವೆ. ಅವರಿಗೆ ಒಂದು ಸಮೀಕ್ಷೆಗೆ 10 ರೂ. ನೀಡಲಾಗುವುದು. ಪ್ರತಿನಿತ್ಯ 50 ಸಮೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕಾಗಿ 90 ಕೋಟಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದೆ.

• ಫಸಲ್ ಭೀಮಾ ಯೋಜನೆಯಡಿ ರೈತರ ವಿಮಾಕಂತು ಪಾವತಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ, ಕೆಲವು ಬೆಳೆಗಳಿಗೆ ಶೇಕಡಾ 2 ಮತ್ತು ಕೆಲವು ಬೆಳೆಗಳಿಗೆ ಶೇಕಡಾ 1.5 ರಷ್ಟು ತಮ್ಮ ಪಾಲಿನ ಕಂತನ್ನು ಪಾವತಿಸಬೇಕು. ಉಳಿದ ಪ್ರೀಮಿಯಂ ಮೊತ್ತವನ್ನು  ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ 50:50 ರಷ್ಟು ಪಾವತಿಸುತ್ತದೆ. ಅದರಂತೆ 2019-20ನೇ ಸಾಲಿನ ಪ್ರೀಮಿಯಂ ಪಾವತಿಗಾಗಿ 546.21 ಕೋಟಿ ರೂ.ಗಳನ್ನು ಪಾವತಿಸಲು ಸಚಿವ ಸಂಪಟು ಸಭೆ ಒಪ್ಪಿಗೆ ನೀಡಿದೆ.

• 2020-21ನೇ ಸಾಲಿನಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲಿ ಹೆಚ್ಚುವರಿಯಾಗಿ ಡಿ.ಎನ್.ಬಿ. ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಹೊಸದಾಗಿ ಸಾತ್ನಕೋತ್ತರ ವೈದ್ಯಕೀಯ ಪದವಿಗೆ 72 ಹೆಚ್ಚುವರಿ ಸೀಟುಗಳನ್ನು ಸೃಷ್ಟಿಸಲಾಗಿದೆ. ಇದರಿಂದ ರಾಜ್ಯದ 10 ಆಸ್ಪತ್ರೆಗಳಲ್ಲಿ ಸಾತ್ನಕೋತ್ತರ ಪದವಿ ಮಾಡಲು ಅವಕಾಶ ಕಲ್ಪಿಸಿದೆ. (ಹೊಳೇನರಸಿಪುರ, ದೊಡ್ಡಬಳ್ಳಾಪುರ, ಗಂಗಾವತಿ, ಶಿರಾ, ಬಸವಕಲ್ಯಾಣ, ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ವೆನ್‍ಲಾಕ್ ಆಸ್ಪತ್ರೆಗಳಲ್ಲಿ ಇದನ್ನು ಆರಂಭಿಸಲಾಗುತ್ತಿದೆ. ನೀಟ್ ಪರೀಕ್ಷೆ ಮೂಲಕ ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 30,000 ರಿಂದ 40,000 ರೂಪಾಯಿಗಳ ಸ್ಟೈಫಂಡ್ ನೀಡಲಾಗುತ್ತದೆ. ಇದರಿಂದ ಸಾತ್ನಕೋತ್ತರ ವೈದ್ಯಕೀಯ ಸೀಟುಗಳು ಹೆಚ್ಚಳವಾಗವುದರ ಜೊತೆಗೆ ನಮ್ಮ ಆಸ್ಪತ್ರೆಗಳಿಗೆ ತಜ್ಞವೈದ್ಯರ ಸೇವೆ ದೊರಕಿದಂತಾಗುತ್ತದೆ ಎಂದು ಸಚಿವರು ಹೇಳಿದರು.

• ಮೈಸೂರಿನಲ್ಲಿ ಜೆ ನರ್ಮ್ ಯೋಜನೆಯಡಿ 24x7 ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿತ್ತು. ಮೊದಲು 194 ಕೋಟಿ ರೂ.ಗಳಿಗೆ ಅಂದಾಜು ಮಾಡಲಾಗಿತ್ತು. ಅದು ಈಗ ಪರಿಷ್ಕøತಗೊಂಡು 229.93 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಈ ಹೆಚ್ಚುವರಿ 50.76 ಕೋಟಿ ರೂ.ಗಳನ್ನು ಒದಗಿಸಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಪಾಲನ್ನು ಸಹ ರಾಜ್ಯ ಸರ್ಕಾರವೇ ಭರಿಸಲಿದ್ದು, ಒಟ್ಟಾರೆ 90 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ ನೀಡಲಾಯಿತು.

• ಹೇಮಾವತಿ ಬಲದಂಡೆ ನಾಲೆ ಶಿಥಿಲವಾಗಿರುವುದರಿಂದ 0.00 ಕಿ.ಮೀ 92.104 ಕಿ.ಮೀ ವರೆಗೆ ನಾಲೆ ಆಧುನೀಕರಣ ಕಾಮಗಾರಿಗೆ 422.75 ಕೋಟಿ. ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

• ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಾವಗಡದಲ್ಲಿ 60 ಹಾಸಿಗೆಗಳ ಹೆರಿಗೆ ಆಸ್ಪತ್ರೆಗಳ ನಿರ್ಮಾಣ, ರಾಯಚೂರು ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವುದು, ದಾವಣಗೆರೆಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಹಾಗೂ ಬಳ್ಳಾರಿಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ನಿರ್ಮಿಸುವ ಕಾಮಗಾರಿಗಳಿಗೆ ಒಟ್ಟಾರೆ 71.80 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.


ಸಂಬಂಧಿತ ಟ್ಯಾಗ್ಗಳು

karnataka assembly session Krishna bayre gowda Congress JDS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ