ಶೋಕಿಗಾಗಿ ಬೈಕ್ ಕಳ್ಳತನ; ಪೊಲೀಸರಿಂದ ಸೆರೆ

Police arrests bike robbers

28-06-2019

ಬೆಂಗಳೂರು: ಶೋಕಿಗಾಗಿ ಮಾಡಲು ಗ್ಯಾಂಗ್ ಕಟ್ಟಿಕೊಂಡು ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ  ಶ್ರೀರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಾಜಿನಗರದ ಯಾಸಿನ್ ಅಲಿಯಾಸ್ ಯಾಸರ್ ರೆಹ್ಮಾನ್ (20), ಆರ್ಟಿ ನಗರದ ನಿಖಿಲ್ (19), ಆಂಧ್ರಪ್ರದೇಶದ ಹಿಂದೂ ಪುರದ ಆರೀಫ್ ಉಲ್ಲಾಖಾನ್ (20) ಹಾಗೂ ಗೋವಿಂದಪುರದ ನಾಸೀರ್ (19) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 2 ಬೈಕ್‍ಗಳೂ ಸೇರಿ 8 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಯಾಸರ್ ಅಹ್ಮದ್ ಹಿಂದೆ ಕೆಂಗೇರಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಬಂಧಿತನಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಇನ್ನೂ ಮೂವರ ಜತೆ ಸೇರಿ ಗ್ಯಾಂಗ್ ಕಟ್ಟಿಕೊಂಡು ಮನೆಗಳ ಮುಂಭಾಗ ವಾಹನ ನಿಲುಗಡೆ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಹೊಂಚು ಹಾಕಿ ಕಳವು ಮಾಡುತ್ತಿದ್ದರು.

ಹ್ಯಾಂಡಲ್ ಮುರಿದು ಇಲ್ಲವೇ ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಹಿಂದುಪುರ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡಿ ಮೋಜು, ಮಸ್ತಿ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ರಾಜಾಜಿನಗರ, ಕಲಾಸಿಪಾಳ್ಯ, ಚಿಕ್ಕಬಳ್ಳಾಪುರ, ವಿಜಯನಗರ, ಶ್ರೀರಾಂಪುರ, ಯಲಹಂಕದ ತಲಾ 1 ಸೇರಿ 5 ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 10 ವಾಹನಗಳ ಮಾಲೀಕರನ್ನು ಪತ್ತೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಶ್ರೀರಾಂಪುರದಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣವೊಂದನ್ನು ದಾಖಲಿಸಿದ್ದ ಇನ್ಸ್‍ಪೆಕ್ಟರ್ ಶಿವಾಜಿರಾವ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳ ಗ್ಯಾಂಗ್‍ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
 


ಸಂಬಂಧಿತ ಟ್ಯಾಗ್ಗಳು

Bengaluru Police Bike Robbers Crime


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ