ಪೊಲೀಸರಿಂದ 389 ಆಟೋಗಳ ವಶ, 2384 ಪ್ರಕರಣ ದಾಖಲು

Police capture 389 autos and files 2384 complaints

28-06-2019

ಬೆಂಗಳೂರು: ಕರೆದ ಸ್ಥಳಕ್ಕೆ ಬಾರದ ಮೀಟರ್ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದು ಸೇರಿ ಸಂಚಾರ ನಿಯಮ ಉಲ್ಲಂಘಿಸುವ ಆಟೋಗಳ ವಿರುದ್ಧ ಶುಕ್ರವಾರ ಬೆಳಿಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿರುವ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು 389 ಆಟೋಗಳನ್ನು ವಶಪಡಿಸಿಕೊಂಡು  2384 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಉಪ್ಪಾರಪೇಟೆ, ಚಿಕ್ಕಪೇಟೆ, ಸಿಟಿಮಾರುಕಟ್ಟೆ, ಮಾಗಡಿ ರಸ್ತೆ, ಕೆಂಗೇರಿ, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಬಸವನಗುಡಿ, ಜಯನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿದಂತೆ ಪಶ್ಚಿಮ ವಿಭಾಗದ 18 ಪೊಲೀಸರು ಸಂಚಾರ ಪೊಲೀಸರು ಠಾಣೆಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ರಿಂದ 9ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.

ರಾಜಾಜಿನಗರದಲ್ಲಿ 239 ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದರೆ ಸಿಟಿ ಮಾರುಕಟ್ಟೆಯಲ್ಲಿ 200, ಕಾಮಾಕ್ಷಿಪಾಳ್ಯದಲ್ಲಿ 194, ವಿವಿಪುರಂನಲ್ಲಿ 181, ಮಾಗಡಿ ರಸ್ತೆಯಲ್ಲಿ 142, ಜಾಲಹಳ್ಳಿ 134, ಕುಮಾರಸ್ವಾಮಿ ಲೇಔಟ್‍ನಲ್ಲಿ 120 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಅವರು ತಿಳಿಸಿದ್ದಾರೆ.

ಕಾಮಾಕ್ಷಿಪಾಳ್ಯದಲ್ಲಿ ಆಟೋಗಳಲ್ಲಿ ಮೀಟರ್ ಸರಿಯಾಗಿ ಪ್ರದರ್ಶಿಸದ 40, ಬ್ಯಾಟರಾಯನಪುರದಲ್ಲಿ 30, ಜಯನಗರದಲ್ಲಿ 33, ಕೆಂಗೇರಿಯಲ್ಲಿ 23 ಸೇರಿ 364 ಪ್ರಕರಣಗಳನ್ನು ದಾಖಲಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 389 ಆಟೋಗಳಿಗೆ ದಂಡ ವಿಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗದಿರುವುದು, ಸರಿಯಾಗಿ ಮೀಟರ್ ಪ್ರದರ್ಶಿಸದಿರುವುದು, ಮೀಟರ್‍ಗಿಂತ ಅಧಿಕ ಹಣ ಕೇಳುವುದೂ ಸೇರಿದಂತೆ ಆಟೋಗಳ ವಿರುದ್ಧ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ಆಟೋಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮಕೈಗೊಳ್ಳಲಾಗುವುದು. ಮುಂಜಾನೆ ಹಾಗೂ ರಾತ್ರಿವೇಳೆ ಕೂಡ ಆಟೋಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಸೌಮ್ಯಲತಾ ಅವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Bengaluru Police Auto Auto rickshaw meter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ