ನೋಟು ಬದಲಾವಣೆ ದಂಧೆಯಲ್ಲಿ ಸಿವಿಲ್ ಕೋರ್ಟ್ ವಕೀಲ !

Kannada News

09-06-2017

ಬೆಂಗಳೂರು: - ಕೇಂದ್ರ ಸರ್ಕಾರ ರದ್ದು ಪಡಿಸಿರುವ 1,000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುವ ದಂಧೆಯಲ್ಲಿ ತೊಡಗಿದ ಸಿವಿಲ್ ಕೋರ್ಟ್ ವಕೀಲ  ಸೇರಿ 6 ಮಂದಿಯನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 2 ಕೋಟಿ 80 ಲಕ್ಷ ಮೌಲ್ಯದ ಹಳೆ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಿವಿಲ್ ನ್ಯಾಯಾಲಯದಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದ ದೊಮ್ಮಲೂರಿನ ಮರೀರೆಡ್ಡಿ (60), ಇಂಜಿನಿಯರ್ ಆಗಿದ್ದ ಆಂಧ್ರದ ಚಿತ್ತೂರಿನ ಬಾನೋಜಿ (59),  ಬಿಟಿಎಂ 2ನೇ ಹಂತದ ದಿನೇಶ್ (30), ಯಲಹಂಕದ ಶ್ರೀನಿವಾಸ ನಗರದ ಹರೀಶ (50), ತಾವರೆಕೆರೆಯ ಎಸ್‍ಜಿಪಾಳ್ಯದ ಚಂದ್ರಶೇಖರ್ (60), ಹೊಸಕೆರೆಹಳ್ಳಿಯ ದಿನೇಶ್ (40) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 2 ಕೋಟಿ 80 ಲಕ್ಷ ಮೌಲ್ಯದ 500 ಹಾಗೂ 1000 ಮುಖಬೆಲೆಯ ನೋಟುಗಳು, ಆಟೋ, ಬೈಕ್‍ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ. ಆರೋಪಿಗಳು ಅಮಾನ್ಯಗೊಂಡಿರುವ ನೋಟುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಅದರ ಮೇಲೆ ತೆಂಗಿನ ಚಿಪ್ಪುಗಳನ್ನು ಇಟ್ಟು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮೈಕೋ ಲೇಔಟ್ ಪೊಲೀಸ್ ಇನ್ಸ್ ಪೆಕ್ಟರ್ ಶೇಖರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ದಂಧೆಯ ಪ್ರಮುಖ ಆರೋಪಿಯಾಗಿದ್ದ ರಮೇಶ್ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಬಂಧಿತರಲ್ಲಿ ನಾಲ್ವರು 60 ವರ್ಷ ವಯಸ್ಸಿನವರಾಗಿದ್ದು, ಮಧುಮೇಹ, ರಕ್ತದೊತ್ತಡ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಮಾನ್ಯಗೊಂಡಿರುವ ನೋಟುಗಳನ್ನು ಎಲ್ಲಿಂದ ತಂದಿದ್ದರು, ಎಲ್ಲಿ ಬದಲಾಯಿಸುತ್ತಿದ್ದರು ಎನ್ನುವುದರ ಬಗ್ಗೆ  ಸಂಪೂರ್ಣ ವಿಚಾರಣೆ ನಡೆಸಲಾಗುತ್ತಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ಇನ್ನೂ ಕೆಲವರ ಮಾಹಿತಿ ಇದ್ದು, ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ