ಅಮೆರಿಕ- ಭಾರತ ದ್ವಿಪಕ್ಷೀಯ ಮಾತುಕತೆ: ಮೋದಿಗೆ ಅಭಿನಂದಿಸಿದ ಟ್ರಂಪ್

Trump thanks Modi

28-06-2019

ಒಸಾಕಾ: ಜಪಾನ್ನ ಒಸಾಕಾದಲ್ಲಿ ನಡೆಯುತ್ತಿರುವ ಜಿ-20ಯ ಔಪಚಾರಿಕ ಶೃಂಗಸಭೆಯ ಆರಂಭಕ್ಕೂ ಮುನ್ನ ನಡೆದ ಮಾತುಕತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ನಡುವಿನ ವ್ಯಾಪಾರ, ರಕ್ಷಣೆ ಮತ್ತು 5ಜಿ ನೆಟ್ವರ್ಕ್ ಸೇರಿದಂತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ತೃತವಾಗಿ ಮಾತುಕತೆ ನಡೆಸಿದರು. ಇಂದಿನ ಮಾತುಕತೆಯಲ್ಲಿ ಪ್ರಧಾನವಾಗಿ ಇರಾನ್ ಬಾಂಧವ್ಯ, 5ಜಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ಹಾಗೂ ರಕ್ಷಣಾ ವಿಚಾರಗಳ ಕುರಿತು ಟ್ರಂಪ್ ಜೊತೆಗೆ ಮಾತುಕತೆ ನಡೆಸಲು ಬಯಸಿದ್ದೆ ಎಂದು ಮೋದಿ ಹೇಳಿದರು. 

ಈ ವೇಳೆ ಡೊನಾಲ್ಡ್ ಟ್ರಂಪ್ ಭಾರತದ ಕುರಿತು ವ್ಯಕ್ತಪಡಿಸಿದ ಪ್ರೀತಿಗೆ ಮೋದಿಯವರು ಕೃತಜ್ಞತೆ ಸಲ್ಲಿಸಿದರು. ಕಳೆದ ಎರಡು ದಿನಗಳ ಹಿಂದೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಭಾರತಕ್ಕೆ ಭೇಟಿ ನೀಡಿದ್ದರು. ಜೊತೆಗೆ 2019ರ ಲೋಕಸಭೆ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಬಹುಮತ ಗಳಿಸಿದ್ದಕ್ಕಾಗಿ ಮೋದಿಯವರಿಗೆ ಟ್ರಂಪ್ ಅಭಿನಂದನೆ ಸಲ್ಲಿಸಿದರು. ಲೋಕಸಭೆ ಚುನಾವಣೆಯದು ಅತ್ಯಂತ ದೊಡ್ಡ ಗೆಲುವು. ಆ ಗೆಲುವು ನಿಮಗೆ ಅರ್ಹವಾಗಿ ಸಂದಿದೆ. ನೀವು ಅತ್ಯುತ್ತಮ ಸಾಧನೆ ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.  

ಮಾತುಕತೆಯ ನಂತರ ಪ್ರತಿಕ್ರಿಯಸಿದ ಟ್ರಂಪ್, ಸೇನೆ, ರಕ್ಷಣೆ ಮೊದಲಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ಜಂಟಿಯಾಗಿ ಕೆಲಸ ಮಾಡಲಿವೆ ಎಂದರು. ನಾವು ಇನ್ನೂ ಹಲವು ವಿಷಯಗಳನ್ನು ಘೋಷಿಸಲಿದ್ದೇವೆ. ವ್ಯಾಪಾರ, ಉತ್ಪಾದನೆ, 5ಜಿ ಸೇರಿದಂತೆ ಹಲವು ವಿಷಯಗಳನ್ನು ವಿಸ್ತಾರವಾಗಿ ಚರ್ಚಿಸಲಿದ್ದೇವೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Narendra Modi Donald J Trump India America


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ