ಕೃಷಿ ಸಾಲ ಕೃಷಿಗೇ ಬಳಸಿ: ಎಂ.ಸಿ.ಮನಗೂಳಿ

Don

26-06-2019

ಬೆಂಗಳೂರು: ಕೃಷಿ ಸಾಲ ಪಡೆಯುವ ರೈತರನ್ನು ಕೃಷಿ ಮಾಡುವುದನ್ನು ಬಿಟ್ಟು ಬೇರೆ ಕೆಲಸಗಳಿಗೆ ಸಾಲದ ಹಣ ಬಳಸಿಕೊಳ್ಳುವುದರಿಂದ ಕೃಷಿ ಹಾಗೂ ಆರ್ಥಿಕವಾಗಿ ಬೆಳವಣಿಗೆ ಸಾಧ್ಯವಾಗುತ್ತಿಲ್ಲ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು ವಿಷಾದಿಸಿದರು.

ಕೃಷಿ ಸಾಲವನ್ನು ಸೂಕ್ತ ರೀತಿಯಲ್ಲಿ ಕೃಷಿಗೆ ಬಳಸಿಕೊಂಡರೆ ರೈತ ಮುಂದುವರೆಯುತ್ತಾನೆ ಅದನ್ನು ಬಿಟ್ಟು ಬೇರೆ ಕೆಲಸಗಳಿಗೆ ಸ್ವಉದ್ದೇಶಕ್ಕೆ ಹೆಚ್ಚು ಬಳಸುತ್ತಿರುವುದರಿಂದ ಕೃಷಿ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದರು.

ನಗರದ ಟಾಟಾ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ಬುಧವಾರ ಆಯೋಜಿಸಿದ್ದ, ದ್ವಿತೀಯ ಕರ್ನಾಟಕ ಖರೀದಿದಾರರು- ಮಾರಾಟಗಾರರ ಭೇಟಿ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಇನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ಇಂದಿಗೂ ವಿವಿಧ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತೇವೆ. ರೈತರು ಉದ್ಧಾರವಾದಾಗ ಈ ದೇಶವೂ ಅಭಿವೃದ್ಧಿಯಾಗುತ್ತದೆ' ಎಂದು ಹೇಳಿದರು.

ತೋಟಗಾರಿಕೆ ಬೆಳೆಗಳು ರೈತರಿಗೆ ದೀರ್ಘಾವಧಿಯ ವರೆಗೆ ಹೆಚ್ಚು ಲಾಭ ತಂದುಕೊಡುತ್ತವೆ. ಆದ್ದರಿಂದ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಬೇಕು ಎಂದ ಅವರು, ಕೃಷಿಗಿಂತಲೂ ತೋಟಗಾರಿಕೆಯಲ್ಲಿ ರೈತರಿಗೆ ಹೆಚ್ಚಿನ ಆದಾಯ ಇದೆ. ತರಕಾರಿ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆದು ಲಾಭ ಪಡೆದುಕೊಳ್ಳಬೇಕು' ಎಂದು ರೈತರಿಗೆ ಸಲಹೆ ನೀಡಿದರು.

ಒಬ್ಬ ರೈತ ಒಂದು ಎಕರೆಯಲ್ಲಿ ಎಷ್ಟೆಲ್ಲ ಬೆಳೆಯನ್ನು ಬೆಳೆಯಬಹುದು. ಹಣ್ಣಿನ ಗಿಡಗಳ ಜತೆಗೆ, ಮೇವಿನ ಬೆಳೆ, ತರಕಾರಿ, ಹೂವಿನ ಗಿಡಗಳನ್ನು ಬೆಳೆಯಬಹುದು. ನೀರಿನ ಕೊರತೆ ಇರುವ ರೈತರು, ಕೃಷಿ ಹೊಂಡದ ನೆರವಿನಿಂದ ಹೇಗೆ ತರಕಾರಿ ಬೆಳೆಯಬಹುದು ಎಂದು ತೋರಿಸುವುದಕ್ಕಾಗಿ ಒಂದು ಎಕರೆಯಲ್ಲಿ `ಸಮಗ್ರ ಕೃಷಿ ಪದ್ಧತಿ' ಅಳವಡಿಸುವ ಕುರಿತು ಮಾಹಿತಿ ಪಡೆಯಬೇಕೆಂದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ ಖರೀದಿದಾರರು- ಮಾರಾಟಗಾರರ ಭೇಟಿ ಕುರಿತು ಮಾತನಾಡಿದರು. ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಪ್ರಮುಖರಿದ್ದರು.


ಸಂಬಂಧಿತ ಟ್ಯಾಗ್ಗಳು

Farmers M C Managuli Agriculture loan Agriculture


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ