ಇವಿಎಂಗಳನ್ನು ಇಂದೇಕೆ ಪ್ರಶ್ನಿಸುತ್ತಿದ್ದೀರಿ?: ಮೋದಿ

why you are questioning EVM

26-06-2019

ದೆಹಲಿ: ಇವಿಎಂಗಳ ಮೂಲಕ ನಡೆದ ಚುನಾವಣೆ ಎದುರಿಸಿರುವ ಪಕ್ಷಗಳು ರಾಜ್ಯಸಭೆಯಲ್ಲಿ ಹಾಜರಿವೆ. ಇವಿಎಂಗಳನ್ನು ಬಳಸಿ ನಡೆಸಿದ ಚುನಾವಣೆಯ ನಂತರ ಅವರಿಗೆ ದೇಶದಲ್ಲಿ ವಿವಿಧೆಡೆ ಸರ್ಕಾರವನ್ನು ರಚಿಸಲು ಅವಕಾಶ ಸಿಕ್ಕಿದೆ. ಹಾಗಾದರೆ ಇಂದು ಏಕೆ ಇವಿಎಂಗಳನ್ನು ಪ್ರಶ್ನಿಸುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳನ್ನು ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ಇವಿಎಂ ವಿರುದ್ಧದ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಚುನಾವಣಾ ಆಯೋಗ ಇವಿಎಂ ಕುರಿತು ಚರ್ಚಿಸಲು ಸರ್ವ ಪಕ್ಷಗಳಿಗೂ ಕರೆ ನೀಡಿತ್ತು. ಆದರೆ, ಸಿಪಿಐ ಮತ್ತು ಎನ್‍ಸಿಪಿ ಮಾತ್ರ ಆಹ್ವಾನವನ್ನು ಮನ್ನಿಸಿದವು. ಇವಿಎಂಗಳ ಕುರಿತು ಹೆಚ್ಚಿನದನ್ನು ಕಲಿಯಲು ಆಯೋಗಕ್ಕೆ ಹೋಗಿದ್ದನ್ನು ನಾನು ಅಭಿನಂದಿಸುತ್ತೇನೆ. ಆದರೆ, ಉಳಿದ ಪಕ್ಷಗಳು ಆಯೋಗದ ಬಳಿಯೇ ಹೋಗದೆ ಇವಿಎಂಗಳನ್ನು ಪ್ರಶ್ನಿಸುತ್ತಿದ್ದಾರೆ. ಆಯೋಗದ ಬಳಿ ಹೋದರೆ ಅವರು ಉತ್ತರ ನೀಡುತ್ತಾರೆ ಎಂದರು.

ಕಾಂಗ್ರೆಸ್‍ನಲ್ಲಿರುವ ನನ್ನ ಸ್ನೇಹಿತರಿಗೆ ನಮ್ಮ ಗೆಲುವನ್ನು ಅರಗಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ತಮ್ಮ ಸೋಲನ್ನು ಒಪ್ಪಿಕೊಳ್ಳಲು ಅವರು ಸಿದ್ಧವಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಲಕ್ಷಣವಲ್ಲ.  ಒಂದು ದೇಶ ಒಂದು ಚುನಾವಣೆ ಕುರಿತ ಚರ್ಚೆಯಲ್ಲೂ ಇದೇ ವರ್ತನೆ ಕಂಡುಬಂದಿದೆ. ಹೌದು, ಕೆಲವರಿಗೆ ಈ ಆಲೋಚನೆ ಹಿಡಿಸದು ಅಥವಾ  ಈ ಕುರಿತು ಅವರ ಆಲೋಚನೆ ಭಿನ್ನವಾಗಿರಬಹುದು. ಆದರೆ, ಇಂತಹ ಆಲೋಚನೆಗಳನ್ನು ಮಂಡಿಸುವುದು ಮತ್ತು ಇದರ ಕುರಿತು ಚರ್ಚಿಸುವುದು ಮುಖ್ಯ ಎಂದರು.

ಈಗ ಮತದಾರರು ಬಹಳ ಅರಿವು ಹೊಂದಿದ್ದಾರೆ. ಕೇವಲ ಲೋಕಸಭೆಯಲ್ಲಿ ಏನಾಗುತ್ತಿದೆ ಎಂಬುದು ಮಾತ್ರವಲ್ಲ, ರಾಜ್ಯಸಭೆಯಲ್ಲಿ ಏನಾಗುತ್ತಿದೆ ಎಂದು ಅವರಿಗೆ ಗೊತ್ತು. ಅವನ್ನೆಲ್ಲ ಮನಸಿನಲ್ಲಿಟ್ಟುಕೊಂಡು ಈ ಬಾರಿ ಮತಹಾಕಿದ್ದಾರೆ ಎಂದರು. ಈಗ ಅವರು (ರಾಜ್ಯಸಭೆ ಸದಸ್ಯರು) ನವ ಭಾರತ (ನ್ಯೂ ಇಂಡಿಯಾ)ವನ್ನು ದೂರುತ್ತಿದ್ದಾರೆ. ಅವರಿಗೆ ಹಳೆಯ ಭಾರತ ಬೇಕೆ? ಹಳೆ ಭಾರತದಲ್ಲಿ ಸಚಿವ ಸಂಪುಟದ ನಿರ್ಧಾರಗಳನ್ನು ಸುದ್ದಿ ಗೋಷ್ಠಿಯಲ್ಲಿ ಹರಿದು ಹಾಕಲಾಗುತ್ತಿತ್ತು, ಹಳೆ ಭಾರತದಲ್ಲಿ ನೌಕಾಸೇನೆಯನ್ನು ವೈಯಕ್ತಿಕ ಪ್ರಯಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿತ್ತು, ಹಳೆಯ ಭಾರತದಲ್ಲಿ ನಡೆದ ಅನೇಕ ಹಗರಣಗಳು ಇಂದಿಗೂ ಅಸ್ತಿತ್ವದಲ್ಲಿವೆ, ಹಳೆ ಭಾರತ ತುಕುಡೆ ತುಕುಡೆ ಗ್ಯಾಂಗ್ ಅನ್ನು ಬೆಂಬಲಿಸಿತ್ತು ಎಂದರು.

ಸದನದಲ್ಲಿರುವ ಯಾವೊಬ್ಬ ಸದಸ್ಯರೂ ಭಾರತ 5 ಟ್ರಿಲಿಯನ್ ಡಾಲರ್ ಮೊತ್ತದ ಆರ್ಥಿಕತೆಯಾಗಿ ಬೆಳೆಯುವುದನ್ನು ಇಷ್ಟಪಡುವುದಿಲ್ಲ ಎಂಬುದು ನನಗೆ ಖಾತ್ರಿ ಇದೆ. ದಯಮಾಡಿ ನಮಗೆ ರಚನಾತ್ಮಕ ಸಲಹೆಗಳನ್ನು ನೀಡಿ. ನಾವು ಸಲಹೆಗಳಿಗೆ ಮುಕ್ತವಾಗಿದ್ದೇವೆ. ಎಲ್ಲ ಬೌದ್ಧಿಕತೆ ನಮ್ಮಲ್ಲಿದೆ ಎಂದು ನಮಗೆ ನಂಬಿಕೆ ಇಲ್ಲ ಎಂದರು.

ಜಾರ್ಖಂಡ್‍ನಲ್ಲಿ ಹತ್ಯೆಯಾಗಿರುವುದು ನನಗೆ ತೀವ್ರ ನೋವು ತಂದಿದೆ. ಇದು ಇತರರಿಗೂ ನೋವು ತಂದಿದೆ. ಆದರೆ, ಕೆಲವರು ರಾಜ್ಯಸಭೆಯಲ್ಲಿ ಜಾರ್ಖಂಡ್ ಹತ್ಯೆಯ ಕೇಂದ್ರ ಎಂದು ಹೇಳಿದರು. ಇದು ಸರಿಯೇ? ಯಾಕೆ ಅವರು ಇಡೀ ರಾಜ್ಯವನ್ನು ಅವಮಾನಿಸುತ್ತಿದ್ದಾರೆ. ಜಾರ್ಖಂಡ್ ರಾಜ್ಯವನ್ನು ಅವಮಾನಿಸುವ ಹಕ್ಕು ನಮ್ಮಲ್ಲಿ ಯಾರಿಗೂ ಇಲ್ಲ ಎಂದರು.

ನನ್ನ ಪ್ರಕಾರ ಆಜಾದ್ ಸಾಹೇಬರಿಗೆ (ಗುಲಾಂ ನಬಿ ಆಜಾದ್) ಮಸುಕಾದ ದೃಷ್ಟಿ ಇದೆ. ಪ್ರಾಯಶಃ ಅವರು ಎಲ್ಲವನ್ನು ರಾಜಕೀಯದ ಕನ್ನಡಕದಿಂದ ನೋಡುತ್ತಿದ್ದಾರೆ ಎಂದ ಅವರು ಗಾಲಿಬ್‍ನ ರಚನೆಯೊಂದನ್ನು ಉಲ್ಲೇಖಿಸಿದರು.

ನೀವು ಎಲ್ಲದರ ಮೇಲಿನ ಹಕ್ಕನ್ನು ಸಾಧಿಸಿ. ನೀವು ಎನ್‍ಆರ್ಸಿ ಮೇಲಿನ ಹಕ್ಕನ್ನು ಸಾಧಿಸಲು ಅವಕಾಶ ಇರಲಿಲ್ಲವೇ? ರಾಜೀವ್ ಗಾಂಧಿಯವರು ಎನ್‍ಆರ್ಸಿಯನ್ನು ಒಪ್ಪಿಕೊಂಡಿದ್ದರೆ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಾವು ಇದನ್ನು ಜಾರಿಗೆ ತಂದಿದ್ದೇವೆ. ನೀವು ಯಾಕೆ ಇದರ ಮೇಲಿನ ಹಕ್ಕಿನ ಕುರಿತು ಮಾತನಾಡುತ್ತಿಲ್ಲ ಎಂದು ಅವರು ಕಾಂಗ್ರೆಸ್ ಅನ್ನು ಪ್ರಶ್ನಿಸಿದರು.


ಸಂಬಂಧಿತ ಟ್ಯಾಗ್ಗಳು

Narendra Modi EVM's Ghulam Nabi Azad Rahul Gandhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ