ಐಎಮ್ಎ ಮಾಲಿಕನ ಸುಳಿವು ಪತ್ತೆ ಹಚ್ಚಿದ ಎಸ್ಐಟಿ

SIT got hint of IMA owner

25-06-2019

ಬೆಂಗಳೂರು: ಅಧಿಕ ಬಡ್ಡಿಯ ಆಸೆ ತೋರಿಸಿ ಕೋಟ್ಯಾಂತರ ವಂಚನೆ ನಡೆಸಿ ಪರಾರಿಯಾಗಿರುವ ಐಎಂಎ ಸಮೂಹ ಸಂಸ್ಥೆ ಮಾಲಿಕ ಮನ್ಸೂರ್ ಖಾನ್‍ನನ್ನು ಶೀಘ್ರವೇ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಅಧಿಕಾರಿಗಳು ಬಂಧಿಸಿ ನಗರಕ್ಕೆ ಕರೆತರಲಿದ್ದಾರೆ.
ಪರಾರಿಯಾಗಿರುವ ಮನ್ಸೂರ್ ಖಾನ್, ಎಲ್ಲಿದ್ದಾನೆ ಎನ್ನುವ ಸುಳಿವು ಪತ್ತೆ ಹಚ್ಚಲಾಗಿದ್ದು 2-3 ದಿನಗಳಲ್ಲಿ ಆತನನ್ನು ಬಂಧಿಸಿ ಕರೆ ತಂದು ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮನ್ಸೂರ್ ಖಾನ್ ಎಲ್ಲಿದ್ದಾನೆ ಎನ್ನುವ ಖಚಿತ ಮಾಹಿತಿ ಎಸ್‍ಐಟಿ ಅಧಿಕಾರಿಗಳಿಗೆ ಬಂದಿದ್ದು, ಅದನ್ನಾಧರಿಸಿ ಕೆಲವೇ ದಿನಗಳಲ್ಲಿ ಬಂಧಿಸಲಿದ್ದಾರೆ. ಆದರೆ, ತನಿಖೆಯ ದೃಷ್ಟಿಯಿಂದ ಹೆಚ್ಚಿನ ವಿವರ ನೀಡಲು ಎಸ್‍ಐಟಿಯ ತನಿಖಾಧಿಕಾರಿಗಳು ನಿರಾಕರಿಸಿದ್ದಾರೆ.
ಮನ್ಸೂರ್‍ಖಾನ್ ಮೂರು ದಿನಗಳ ಹಿಂದೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಗೊಂದಲದ ಅಂಶಗಳಿವೆ. ಅವುಗಳನ್ನು ಪರಿಶೀಲಿಸಿದಾಗ ತನಿಖೆಯ ಹಾದಿ ತಪ್ಪಿಸಿರುವ ಅನುಮಾನ ವ್ಯಕ್ತವಾಗಿದೆ. ಆದರೂ, ಮನ್ಸೂರ್‍ನ ಸುಳಿವು ಪತ್ತೆಯಾಗಿದ್ದು, ತನಿಖೆ ಒಂದು ಹಂತಕ್ಕೆ ಬಂದು ನಿಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಸುಮಾರು 1,547 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿಸಿಕೊಂಡು ಮನ್ಸೂರ್ ವಂಚನೆ ನಡೆಸಿರುವುದು ಇಲ್ಲಿಯವರೆಗಿನ ದೂರುಗಳಿಂದ ಪತ್ತೆಯಾಗಿದೆ. ಆದರೆ, .ಆತನ ಬಳಿ ವಶಪಡಿಸಿಕೊಂಡಿರುವ ಮಾಲುಗಳು ಕೇವಲ 300 ಕೋಟಿ ರೂ.ಗಳಷ್ಟಾಗಿದೆ. 
ಮನ್ಸೂರ್‍ನ ಜಯನಗರ, ಶಿವಾಜಿನಗರದ 3 ಜ್ಯುವೆಲರ್ಸ್ ಮಳಿಗೆಗಳು, ಕಚೇರಿ, ಪತ್ನಿಯರ ಮನೆಗಳ ಮೇಲೆ ದಾಳಿ, ಬಂಧಿತ 13 ಮಂದಿ ನಿರ್ದೇಶಕರುಗಳ ಬಳಿ ದೊರೆತಿರುವ ಆಸ್ತಿ-ಪಾಸ್ತಿಗಳನ್ನೆಲ್ಲ ಲೆಕ್ಕ ಹಾಕಿದ್ದು, ಅದು 300 ಕೋಟಿ ರೂ.ನಷ್ಟಾಗಿದೆ ಎಂದು ತಿಳಿದು ಬಂದಿದೆ.
ಇಷ್ಟು ಕಡಿಮೆ ಹಣದಲ್ಲಿ ಹೂಡಿಕೆದಾರರಿಗೆ ಅವರ ಹಣ ಹಿಂದಿರುಗಿಸಿ ನ್ಯಾಯ ಒದಗಿಸುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಮನ್ಸೂರ್‍ನನ್ನು ಬಂಧಿಸಿ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರೆ, ಆತ ಮಾಡಿಸಿಕೊಂಡಿರುವ ಹೂಡಿಕೆ, ನೀಡಿರುವ ಬಡ್ಡಿ, ಆಸ್ತಿ-ಪಾಸ್ತಿಗಳ ವಿವರ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

IMA Mohammed mansoor khan IMA jewels IMA scam


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ