ಕುಮಾರಸ್ವಾಮಿಯವರು ೫ ವರ್ಷದ ಆಡಳಿತ ಪೂರ್ಣಗೊಳಿಸಲು ಸಿದ್ಧರಾಮಯ್ಯ ಅಭಯ ಹಸ್ತ

siddaramaiah says he will help kumaraswami to complete 5 year rule

20-06-2019

ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಯಾವ ತೊಂದರೆಯೂ ಇಲ್ಲದೆ ಐದು ವರ್ಷ ಪೂರೈಸುವಂತೆ ನೋಡಿಕೊಳ್ಳುತ್ತೇನೆ.ಈ ವಿಷಯದಲ್ಲಿ ವಚನದ್ರೋಹ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಭರವಸೆ ನೀಡಿದ್ದಾರೆ.

ದೆಹಲಿ ಭೇಟಿಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಸಿದ್ದರಾಮಯ್ಯ,ದೇಶ ಕೋಮುವಾದಿಗಳ ಹಿಡಿತದಲ್ಲಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಎಷ್ಟು ಸೂಕ್ಷ್ಮ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದು ತಮಗೆ ಗೊತ್ತಿದೆ ಎಂದಿದ್ದಾರೆ.

ಜೆಡಿಎಸ್‌ ಜತೆ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವುದು ಬೇಡ.ಇಂತಹ ಮೈತ್ರಿ ಮಾಡಿಕೊಂಡಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ನಾವು ಹೀನಾಯ ಸೋಲು ಅನುಭವಿಸಬೇಕಾಯಿತು.

ಒಂದು ವೇಳೆ ಮೈತ್ರಿ ಮಾಡಿಕೊಳ್ಳುವ ಬದಲು ಫ್ರೆಂಡ್ಲಿ ಫೈಟ್‌ ಅಂತ ಮಾಡಿದ್ದರೆ ಉಭಯ ಪಕ್ಷಗಳು ಸೇರಿ ನಿರಾಯಾಸವಾಗಿ ಹತ್ತು ಸೀಟುಗಳನ್ನು ಗೆಲ್ಲಬಹುದಿತ್ತು.

ಇತ್ತೀಚಿಗೆ ನಡೆದ ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಇದಕ್ಕೆ ಸಾಕ್ಷಿ.ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಮೈತ್ರಿಕೂಟ ಈ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರ ಪರಿಣಾಮವಾಗಿ ಗಣನೀಯ ಪ್ರಮಾಣದ ಸೀಟುಗಳನ್ನು ಗೆಲ್ಲುವಂತಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಕಮಲ ಪಾಳೆಯದ ಬಹುತೇಕ ನಾಯಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೆಚ್ಚಿನ ಸ್ಥಾನ ಗಳಿಸಿದವು.

ಇವತ್ತು ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕೈ ಜೋಡಿಸುವುದು ಬೇರೆ.ಆದರೆ ಚುನಾವಣೆಗಳಲ್ಲಿ ಕೈ ಜೋಡಿಸುವುದು ಬೇರೆ.

ಯಾಕೆಂದರೆ ಜೆಡಿಎಸ್‌ ಮೂಲದಲ್ಲಿ ಜನತಾಪರಿವಾರದ ಟೊಂಗೆಯೇ ಆಗಿದ್ದು,ಕಾಂಗ್ರೆಸ್‌ ಪಕ್ಷದ ವಿರುದ್ಧವಾಗಿಯೇ ಜನ್ಮ ತಾಳಿದ್ದು ಎಂಬ ಐತಿಹಾಸಿಕ ಸತ್ಯವನ್ನು ಮರೆಯಬಾರದು.

ಇದನ್ನು ಮರೆತು ಪರಸ್ಪರ ಕೈ ಜೋಡಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಗ್ಗೂಡಿ ಚುನಾವಣೆಗಳನ್ನು ಎದುರಿಸಿದರೆ ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸುವ ಜೆಡಿಎಸ್‌ ಬೆಂಬಲಿಗರು ಬಿಜೆಪಿ ಕಡೆ ವಾಲುತ್ತಾರೆ.ಅದೇ ರೀತಿ ಜೆಡಿಎಸ್‌ ಪಕ್ಷವನ್ನು ವಿರೋಧಿಸುವ ಕಾಂಗ್ರೆಸ್‌ ಬೆಂಬಲಿಗರು ಬಿಜೆಪಿ ಕಡೆ ವಾಲುತ್ತಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಧರ್ಮದ ಆಧಾರದ ಟ್ರಂಪ್‌ ಕಾರ್ಡ್‌ ಬಳಸಿದರೂ,ಅದರ ಜತೆಗೆ ಈ ಅಂಶವೂ ಅದಕ್ಕೆ ಪೂರಕವಾಗಿ ಪರಿಣಮಿಸಿತು.ಹೀಗಾಗಿ ಮುಂದಿನ ಯಾವುದೇ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಮೈತ್ರಿ ಬೇಡ.

ಇದರ ಬದಲು ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸೋಣ ಎಂದ ಸಿದ್ಧರಾಮಯ್ಯ,ದೇಶದ ರಾಜಕೀಯ ವಿದ್ಯಮಾನವನ್ನು ಗಮನಿಸಿಯೂ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ಉರುಳಿಸಬೇಕು ಅಂತ ಯೋಚಿಸಿದರೆ ಅದು ತಪ್ಪು.

ವಾಸ್ತವಿಕ ದೃಷ್ಟಿಯಿಂದ ಅದು ಸರಿಯೂ ಅಲ್ಲ.ಹೀಗಾಗಿ ಸಮ್ಮಿಶ್ರ ಸರ್ಕಾರಕ್ಕೆ ನನ್ನಿಂದ ಯಾವ ತೊಂದರೆಯೂ ಆಗುವುದಿಲ್ಲ.ಹಾಗೆಯೇ ಕೆಪಿಸಿಸಿಯಲ್ಲಿ ವಿಸಿಟಿಂಗ್‌ ಕಾರ್ಡ್‌ ಪದಾಧಿಕಾರಿಗಳೇ ಹೆಚ್ಚಿರುವುದರಿಂದ ಅವರಿಗೆ ವಿಶ್ರಾಂತಿ ನೀಡುವ ಅನಿವಾರ್ಯತೆ ಇದೆ.

ಅವರ ಬದಲು ಕ್ರಿಯಾಶೀಲರಾಗಿರುವವರು ಪಕ್ಷದ ಪದಾಧಿಕಾರಿಗಳಾದರೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಸಾಧ್ಯ.ಹೀಗಾಗಿ ಇನ್ನೊಂದು ವಾರದಲ್ಲಿ ಕೆಪಿಸಿಸಿಯನ್ನು ಪುನರ್‌ ರಚಿಸಿ ಕಾಂಗ್ರೆಸ್‌ ಶಕ್ತಿಯನ್ನು ಬಲಪಡಿಸೋಣ ಎಂದು ಸಿದ್ಧರಾಮಯ್ಯ ಸಲಹೆ ನೀಡಿದರು.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷದ ಶಕ್ತಿ ಕುಸಿದಿರುವ ಈ ಸಂದರ್ಭದಲ್ಲಿ ಅದರ ಚುಕ್ಕಾಣಿ ಹಿಡಿದಿರುವ ನಿಮ್ಮ ಕೈಯ್ಯನ್ನು ಬಲಪಡಿಸುವುದು ಮಾತ್ರ ನನ್ನ ಗುರಿ.ಹೀಗಾಗಿ ಸಮ್ಮಿಶ್ರ ಸರ್ಕಾರಕ್ಕೆ ನನ್ನಿಂದ ಯಾವ ತೊಂದರೆಯೂ ಇಲ್ಲ.ತೊಂದರೆ ಕೊಡುವವರನ್ನು ಸುಮ್ಮನಿರಿಸುವುದು ನನಗೆ ಗೊತ್ತಿದೆ ಎಂದು ಸಿದ್ಧರಾಮಯ್ಯ ಅಭಯ ನೀಡಿದ್ದಾರೆ ಎಂದು ಎಐಸಿಸಿಯ ಉನ್ನತ ಮೂಲಗಳು ಹೇಳಿವೆ.


ಸಂಬಂಧಿತ ಟ್ಯಾಗ್ಗಳು

kumaraswami siddaramaiah congress jds


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ