ಕೆಪಿಸಿಸಿ ಪುನಾರಚನೆಗೆ ಮುಂದಾದ ಹೈಕಮಾಂಡ್

KPCC reshuffle

19-06-2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಪುನರ್ರಚಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿದಂತೆ ಉಳಿದ ಪದಾಧಿಕಾರಿಗಳ ಪಟ್ಟಿಯನ್ನು ವಿಸರ್ಜಿಸಲಾಗಿದೆ.

ಎಐಸಿಸಿ ನಿರ್ಧಾರದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಹಾಲಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಉಳಿದೆಲ್ಲ ಪದಾಧಿಕಾರಿಗಳು ಅಧಿಕಾರ ಕಳೆದುಕೊಂಡಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಅವರು ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಈ ಬೆಳವಣಿಗೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಿ ಮಧ್ಯಂತರ ಚುನಾವಣೆ ಎದುರಾಗುತ್ತದೆ ಎಂಬ ಮಾತು ದಟ್ಟವಾಗುತ್ತಿದ್ದಂತೆಯೇ ಕೆಪಿಸಿಸಿ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

ಕೆಪಿಸಿಸಿ ಪದಾಧಿಕಾರಿಗಳಾಗಿರುವವ ಪೈಕಿ ಬಹುತೇಕ ಮಂದಿ ಉತ್ಸಾಹವನ್ನೇ ಕಳೆದುಕೊಂಡಿದ್ದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ ಎಂಬ ವರದಿಯನ್ನು ಇದೇ ಕೆ.ಸಿ.ವೇಣುಗೋಪಾಲ್ ಅವರು ವರಿಷ್ಟರಿಗೆ ನೀಡಿದ್ದರು. ಕೇವಲ ಒಳಜಗಳಕ್ಕೆ ಕುಮ್ಮಕ್ಕು ನೀಡುತ್ತಾ,ಪಕ್ಷ ಸಂಘಟನೆಯನ್ನು ನಿರಾಸಕ್ತಿ ತೋರುತ್ತಾ ಪದಾಧಿಕಾರಿಗಳ ಜಾಗದಲ್ಲಿ ಕುಳಿತಿರುವ ಇಂತವರನ್ನಿಟ್ಟುಕೊಂಡರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾದಾಗ ಗಂಡಾಂತರ ಅನುಭವಿಸಬೇಕಾಗುತ್ತದೆ.

ಹೀಗಾಗಿ ತಕ್ಷಣವೇ ಕೆಪಿಸಿಸಿಯನ್ನು ಪುನರ್ರಚಿಸಬೇಕು.ಪರಿಣಾಮಕಾರಿ ಕೆಲಸ ಮಾಡುವವರನ್ನು ನೇಮಕ ಮಾಡಬೇಕು.ಆ ಮೂಲಕ ಮುಂದಿನ ಯುದ್ಧಕ್ಕೆ ಅಣಿಯಾಗಬೇಕು ಎಂದು ಕೆ.ಸಿ.ವೇಣುಗೋಪಾಲ್ ಹೈಕಮಾಂಡ್‍ಗೆ ವರದಿ ನೀಡಿದ್ದರೆನ್ನಲಾಗಿದೆ. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ವರಿಷ್ಟರು ಹಾಲಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಪದಾಧಿಕಾರಿಗಳ ಪಟ್ಟಿಯನ್ನು ರದ್ದು ಮಾಡಿದ್ದು ಬದಲಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಅತೃಪ್ತ ನಾಯಕರಿಗೆ ಕೆಪಿಸಿಸಿ ಮಟ್ಟದಲ್ಲಿ ಸೂಕ್ತ ಸ್ಥಾನ ಮಾನ ನೀಡುವ ನಿರೀಕ್ಷೆಗಳಿವೆ.


ಸಂಬಂಧಿತ ಟ್ಯಾಗ್ಗಳು

KPCC Dinesh Gundurao High command HD Kumaraswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ