ನಿವೃತ್ತ ಪೇದೆಗೆ ಗುದ್ದಿ ಪರಾರಿಯಾಗಿದ್ದ ಆಟೋ ಪತ್ತೆ

police finds auto which caused death of a retired police constable at madiwal market

19-06-2019

ಬೆಂಗಳೂರು: ಮಡಿವಾಳದ ಮಾರುಕಟ್ಟೆ ಬಳಿ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದು ನಿವೃತ್ತ ಪೋಲಿಸ್ ಪೇದೆಯೊಬ್ಬರು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.
ಮೃತಪಟ್ಟವರನ್ನು ಮಡಿವಾಳದ ಕೆಎಸ್‍ಆರ್‍ಪಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ರಾಜ್ಯ ಮೀಸಲುಪಡೆಯ (ಕೆಎಸ್‍ಆರ್‍ಪಿ) ನಿವೃತ್ತ ಪೇದೆ ರಾಮರಾವ್ (65) ಎಂದು ಗುರುತಿಸಲಾಗಿದೆ.
ಮಡಿವಾಳ ಮಾರುಕಟ್ಟೆ ಬಳಿ ಕಳೆದ ಜೂನ್ 17 ರಂದು ಮಧ್ಯಾಹ್ನ 1.15ರ ವೇಳೆ ರಾಮರಾವ್ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ರಾಮರಾವ್ ಅವರನ್ನು ಕೂಡಲೇ ಹತ್ತಿರದ ವೆಂಕಟೇಶ್ವರ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆರಾತ್ರಿ ಮೃತಪಟ್ಟಿದ್ದಾರೆ.

ಹೆಸರಿನಿಂದ ಆಟೋ ಪತ್ತೆ

ರಾಮರಾವ್ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆಟೋದ ದೃಶ್ಯ ಹತ್ತಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತಾದರೂ, ಅದರ ಸಂಖ್ಯೆ ಕಾಣಿಸುತ್ತಿರಲಿಲ್ಲ. ಆದರೆ ಹಸಿರು ಬಣ್ಣದಿಂದ ಬರೆದ ಅಕ್ಷರಗಳು ಕಾಣಿಸಿವೆ.

ಅದನ್ನು ಆಧರಿಸಿ ಮಡಿವಾಳ ಮಾರ್ಕೆಟ್ ಸುತ್ತಮುತ್ತಲ ಸುಮಾರು 20ಕ್ಕೂ ಹೆಚ್ಚು ಆಟೋ ಚಾಲಕರನ್ನು ವಿಚಾರಣೆ ನಡೆಸಲಾಯಿತಾದರೂ ಆಟೋದ ಬಗ್ಗೆ ನಿಖರ  ಮಾಹಿತಿ ಲಭ್ಯವಾಗಿರಲಿಲ್ಲ. ಕೊನೆಗೆ ಲಾಲ್‍ಬಾಗ್ ಸಿದ್ದಾಪುರದ ಬಳಿ ಮನೆಯೊಂದರ ಮುಂದೆ ನಿಂತಿದ್ದ ಎರಡು ಆಟೋಗಳನ್ನು ಅನುಮಾನಾಸ್ಪದವಾಗಿ ಪರಿಶೀಲನೆ ನಡೆಸಲಾಯಿತು.

ಸಿದ್ದಾಪುರದಲ್ಲಿ ಸಿಕ್ಕಿಬಿದ್ದ

ಅದರಲ್ಲಿ ಒಂದು ಆಟೋ ಅಪಘಾತವೆಸಗಿದ ಆಟೋಗೆ ಹೋಲಿಕೆಯಾಗಿದ್ದು, ಅದರ ಚಾಲಕ ಶೋಯೆಬ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಘಾತವೆಸಗಿರುವುದನ್ನು ಬಾಯಿಬಿಟ್ಟಿದ್ದಾನೆ. ಆತನನ್ನು ಬಂಧಿಸಿರುವ ಮಡಿವಾಳ ಸಂಚಾರ ಪೋಲಿಸ್ ಠಾಣೆ ಇನ್ಸ್‍ಪೆಕ್ಟರ್ ಗವಿಸಿದ್ದಪ್ಪ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

police constable accident accident madiwala market bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ