ಬಿ ಎಸ್ ವೈ ಸಿಎಂ ಆಸೆ ತಪ್ಪೇನಲ್ಲ; ಡಿ.ಕೆ. ಶಿವಕುಮಾರ್

Yediyurappa dreaming of becoming CM is not wrong: D K Shivakumar

14-06-2019

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದು ತಾವು ಸಿಎಂ ಆಗಬೇಕೆಂಬ ಆಸೆ ಯಡಿಯೂರಪ್ಪನವರದ್ದು. ಪಾಪ, ಅವರ ಆಸೆ ಅವರು ಪಡಲಿ, ಅದರಲ್ಲಿ ತಪ್ಪೇನೂ ಇಲ್ಲ..! ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ. ಇದಕ್ಕೆ ಮೊದಲು ಯಡಿಯೂರಪ್ಪನವರು ‘ಮಿತ್ರ ಪಕ್ಷದ ಶಾಸಕರು ಪರಸ್ಪರ ಹೊಡೆದಾಡಿಕೊಂಡು ಸರ್ಕಾರ ಬೀಳುತ್ತದೆ’ ಎಂದು ಹೇಳಿಕೆ ನೀಡಿದ್ದರು.

ಇಂದು ನಾವು ಜಿಂದಾಲ್ ಕಂಪನಿಗೆ ಜಾಗ ನೀಡಲು ಬಿಜೆಪಿಯ ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಸದಾನಂದಗೌಡರು ಕಾರಣ. ಅವರೇ ಅದಕ್ಕೆ ಅಡಿಪಾಯ ಹಾಕಿದ್ದು. ಅವರು ಮಾಡಿದ್ದನ್ನು ಸರಕಾರ ಮುಂದುವರಿಸಿಕೊಂಡು ಹೋಗಿದೆ. ಈಗ ಅದು ಒಂದು ಹಂತಕ್ಕೆ ಬಂದು ನಿಂತಿದೆ. ಬೇಕಿದ್ದರೆ ದಾಖಲೆಗಳನ್ನು ತೆಗೆಸಿ ನೋಡಲಿ’ ಎಂದು ಶಿವಕುಮಾರ್ ಹೇಳಿದರು.

ನಾವು ಕೈಗಾರಿಕೆಗಳನ್ನು ಬೆಳೆಸದಿದ್ದರೆ ಸರ್ಕಾರ ಎಲ್ಲ ಜನರಿಗೂ ಉದ್ಯೋಗ ನೀಡಲು ಸಾಧ್ಯವಾಗುತ್ತದೆಯೇ? ಪ್ರಧಾನಮಂತ್ರಿಗಳು 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ಕೊಟ್ಟದ್ದರಲ್ಲಾ, ಏನು ಅವೆಲ್ಲ ಸರ್ಕಾರಿ ಉದ್ಯೋಗಗಳೇ? ಜಮೀನು ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳು ಮರುಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಬೇಕಿದ್ದರೆ ಯಡಿಯೂರಪ್ಪನವರೂ ಪರಿಶೀಲನೆ ಮಾಡಲಿ. ಮಾಜಿ ಮುಖ್ಯಮಂತ್ರಿಯಾಗಿ ಅವರ ನಿಲುವೇನು? ಕೈಗಾರಿಕೆಗಳನ್ನು ರಾಜ್ಯದಿಂದ ಹೊರಹಾಕಲು ಬಯಸುತ್ತಾರೆಯೇ? ಎಲ್ಲದಕ್ಕೂ ಈ ರೀತಿ ತಗಾದೆ ಎತ್ತಿದರೆ ಯಾರು ಬಂದು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಾರೆ. ರಾಜ್ಯ ಸರ್ಕಾರದ ಸಚಿವನಾಗಿ ನಾನು ಹೇಳುತ್ತಿದ್ದೇನೆ. ಕೈಗಾರಿಕೆಗಳಿಗೆ ನಾವು ಬೆಂಬಲ ನೀಡುತ್ತೇವೆ. ಯಾರು ರಾಜ್ಯದಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೋ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಶಿವಕುಮಾರ್ ಹೇಳಿದರು.

ಈ ಹಿಂದೆ ಮೈಸೂರಿನಲ್ಲಿ ಇನ್ಫೋಸಿಸ್ ಕಂಪನಿಗೆ ಜಾಗ ನೀಡಿದಾಗಲೂ ಇದೇ ರೀತಿ ವಿರೋಧ ವ್ಯಕ್ತಪಡಿಸಿದ್ದರು. ಈಗ ರಾಜ್ಯದ ಪ್ರಗತಿಗೆ ಇನ್ಫೋಸಿಸ್ ಸಾಕಷ್ಟು ಕೊಡುಗೆ ನೀಡಿದೆ. ಸಾವಿರಾರು ಜನಕ್ಕೆ ಉದ್ಯೋಗ ನೀಡಿದೆ’ ಎಂದು ಶಿವಕುಮಾರ್ ಹೇಳಿದರು.


ಸಂಬಂಧಿತ ಟ್ಯಾಗ್ಗಳು

D k shivakumar yediyurappa jindal H D Kumaraswami


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ