ದೇಶದಲ್ಲಿ 2750 ಹೆಚ್ಚುವರಿ ವೈದ್ಯಕೀಯ ಸೀಟು

2750 more medical seats

14-06-2019

ದೇಶದಲ್ಲಿ ಪ್ರಸಕ್ತ ಸಾಲಿನಿಂದ 25 ನೂತನ ವೈದ್ಯಕೀಯ ಕಾಲೇಜುಗಳು ಆರಂಭಗೊಂಡಿರುವುದರಿಂದ 2750 ಹೆಚ್ಚುವರಿ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಲಭ್ಯವಾಗಲಿವೆ. ಇದರಿಂದಾಗಿ ಒಂದೇ ವರ್ಷದಲ್ಲಿ 2750 ಹೆಚ್ಚುವರಿ ವೈದ್ಯಕೀಯ ಪದವಿ ಪ್ರವೇಶಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಬೋಧಕ ವರ್ಗ ಸೂಕ್ತ ಸಂಖ್ಯೆಯಲ್ಲಿ ದೊರೆಯದ ಕಾರಣ ವೈದ್ಯಕೀಯ ಕಾಲೇಜುಗಳ ಹೆಚ್ಚಳಕ್ಕೆ ಸರ್ಕಾರ ಹಿಂದೇಟು ಹಾಕುತ್ತಿತ್ತು. 
ಹೊಸದಾಗಿ ಆರಂಭಗೊಳ್ಳುತ್ತಿರುವ 25 ಕಾಲೇಜುಗಳಿಗೆ ಅಂದಾಜು 3 ಸಾವಿರಕ್ಕೂ ಅಧಿಕ ಬೋಧಕ ವರ್ಗದ ಅವಶ್ಯಕತೆ ಇದ್ದು, ಅವುಗಳಲ್ಲಿ 600 ಪ್ರಾಧ್ಯಪಕರು, 1 ಸಾವಿರ ಉಪ ಪ್ರಾಧ್ಯಾಪಕರು ಹಾಗೂ 1500 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ.
ಈಗಿರುವ ವೈದ್ಯಕೀಯ ಕಾಲೇಜುಗಳಲ್ಲೂ ಸಹ ಬೋಧಕ ವರ್ಗಗಳ ಕೊರತೆಯಿದೆ. ಪ್ರಸ್ತುತ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳನ್ನು ಮತ್ತು ತಜ್ಞವೈದ್ಯರನ್ನು ಖಾಸಗಿ ವಲಯಗಳು ಹಾಗೂ ಖಾಸಗಿ ಪ್ರಾಕ್ಟೀಸ್‍ಗಳು ಹೆಚ್ಚು ಆಕರ್ಷಿಸುತ್ತಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಬೋಧಕ ವರ್ಗದ ಕೊರತೆಯುಂಟಾಗುತ್ತಿದೆ.

ಭಾರತೀಯ ವೈದ್ಯಕೀಯ ಪರಿಷತ್ ಅಧ್ಯಕ್ಷ ಹಾಗೂ ನೀತಿ ಆಯೋಗದ ಸದಸ್ಯ ಡಾ. ವಿನೋದ್‍ಪೌಲ್, ವೈದ್ಯಕೀಯ ಕಾಲೇಜುಗಳಲ್ಲಿನ ಬೋಧಕ ವರ್ಗ ಕೊರತೆ ನೀಗಿಸಲು ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡಬೇಕು. ಅದರೊಂದಿಗೆ ನಿವೃತ್ತಿ ಹೊಂದಿರುವವರನ್ನು ಪುನರ್ ನೇಮಕ ಮಾಡಿಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2016 ರಿಂದ ಇದುವರೆಗೂ 100ಕ್ಕೂ ಹೆಚ್ಚು ಕಾಲೇಜುಗಳು ಆರಂಭಗೊಂಡಿದ್ದು, 9 ಸಾವಿರಕ್ಕೂ ಅಧಿಕ ಬೋಧಕ ವರ್ಗದ ಅವಶ್ಯಕತೆ ಕಂಡು ಬಂದಿತ್ತು. ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 35,688 ಸೀಟುಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 35,290 ಸೀಟುಗಳು ಪ್ರವೇಶಕ್ಕೆ ಲಭ್ಯವಿದೆ.
 


ಸಂಬಂಧಿತ ಟ್ಯಾಗ್ಗಳು

medical seats mbbs medical college education


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ