ನೂತನ ಸಚಿವರಾಗಿ ಆರ್ ಶಂಕರ್, ನಾಗೇಶ್ ಪ್ರಮಾಣ

Karnataka Cabinet expansion

14-06-2019

ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಆರ್.ಶಂಕರ್ ಹಾಗೂ ನಾಗೇಶ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಜೆಡಿಎಸ್ ವತಿಯಿಂದ ಬಂಡೆಪ್ಪ ಕಾಶೆಂಪೂರ್ ಅವರನ್ನು ಕೈ ಬಿಟ್ಟು ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರನ್ನು ಮಂತ್ರಿಯನ್ನಾಗಿ ಮಾಡಲು ಮಾಜಿ ಪ್ರಧಾನಿ ದೇವೇಗೌಡ ಉತ್ಸುಕರಾಗಿದ್ದರೂ ಕಾರಣಾಂತರಗಳಿಂದ ಅವರ ಹೆಸರನ್ನು ಕೈ ಬಿಡಲಾಯಿತು.

ಇದೇ ರೀತಿ ತಮ್ಮ ಕೋಟಾದಲ್ಲಿ ಬಾಕಿ ಉಳಿದಿರುವ ಒಂದು ಸ್ಥಾನವನ್ನು ಭರ್ತಿ ಮಾಡಿ ಅಲ್ಪಸಂಖ್ಯಾತ ನಾಯಕ ಬಿ.ಎಂ.ಫಾರೂಕ್ ಅವರಿಗೆ ಅವಕಾಶ ಕಲ್ಪಿಸಬೇಕು ಎಂಬ ಲೆಕ್ಕಾಚಾರ ಜೆಡಿಎಸ್‍ನಲ್ಲಿ ನಡೆದಿತ್ತಾದರೂ ಅಂತಿಮ ಕ್ಷಣದಲ್ಲಿ ಆ ಚಿಂತನೆಯನ್ನು ಕೈ ಬಿಡಲಾಯಿತು.ಹೀಗಾಗಿ ಜೆಡಿಎಸ್ ಕೋಟಾದಡಿ ಪಡೆದಿದ್ದ ಸಚಿವ ಸ್ಥಾನಕ್ಕೆ ದಲಿತ ಸಮುದಾಯಕ್ಕೆ ಸೇರಿದ ನಾಗೇಶ್ ಅವರನ್ನು ಭರ್ತಿ ಮಾಡಲಾಯಿತಾದರೆ, ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಕುರುಬ ಸಮುದಾಯದ ಆರ್.ಶಂಕರ್ ಭರ್ತಿ ಮಾಡಿದರು.

ಹೀಗೆ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಕಾಣಿಸಿಕೊಂಡಿದ್ದು ಹಿರಿಯ ನಾಯಕರಾದ ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವರು ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ.

ಹೀಗಾಗಿ ಸಂಪುಟ ವಿಸ್ತರಣೆಯ ನಂತರವೂ ಕೈ ಪಾಳೆಯದಲ್ಲಿ ಭಿನ್ನಸ್ವರ ಕೇಳಿ ಬರುತ್ತಿದ್ದರೆ, ಇತ್ತ ಜೆಡಿಎಸ್ ಪಾಳೆಯದಲ್ಲೂ ಸಣ್ಣ ಮಟ್ಟದ ಅಸಮಾಧಾನ ಕಾಣಿಸಿಕೊಂಡಿದೆ.

ಗಮನ ಸೆಳೆಯುವ ಸಂಗತಿ ಎಂದರೆ ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರೂ ಹಾಜರಿರಲಿಲ್ಲ.


ಸಂಬಂಧಿತ ಟ್ಯಾಗ್ಗಳು

Cabinet Nagesh R Shankar Minister


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ