ಐಎಂಎ ವಂಚನೆ ಪ್ರಕರಣದ ತನಿಖೆ ತೀವ್ರ

IMA Jewels Cheating case

13-06-2019

ಬೆಂಗಳೂರು, ಜೂ. 13-ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಅಧಿಕಾರಿಗಳು ಪ್ರಕರಣದ ಸಂಬಂಧ ಬಂಧಿಸಿರುವ ಕಂಪನಿಯ 7 ಮಂದಿ ನಿರ್ದೇಶಕರನ್ನು ವಿಚಾರಣೆಗೊಳಪಡಿಸಿ ವಂಚನೆಯ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ.

ಪ್ರಕರಣದ ಸಂಬಂಧ ಬಂಧಿಸಲಾಗಿದ್ದ ಕಂಪನಿಯ ನಿರ್ದೇಶಕರಾದ ನಿಜಾಮ್‍ವುದ್ದೀನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಹರ್ಷದ್ ಖಾನ್, ವಾಸಿಂ, ಅನ್ವರ್ ಪಾಷಾ ಹಾಗೂ ದಾದಾಪೀರ್‍ನನ್ನು ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ನಡುವೆ ಐಎಂಎ ಕಂಪನಿಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಫೇಮಾ ಕಾಯ್ದೆಯನ್ನು ಉಲ್ಲಂಘಿಸಿ ವಿದೇಶದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ.

ವಿದೇಶದಲ್ಲಿ ಮನ್ಸೂರ್ ಖಾನ್ ಕೋಟ್ಯಂತರ ಹೂಡಿಕೆ ಮಾಡಿರುವುದನ್ನು ಜಾರಿ ನಿರ್ದೇಶನಾಲಯ (ಇಡಿ)ಪತ್ತೆಹಚ್ಚಿ  ರಿಸರ್ವ್‍ಬ್ಯಾಂಕ್ ಗಮನಕ್ಕೆ ತಂದಿದೆ.ಕೂಡಲೇ ರಿಸರ್ವ್‍ಬ್ಯಾಂಕ್‍ನ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ವಂಚನೆಯ ಸಂಬಂಧ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿರಾಜು ಅವರಿಗೆ ಪತ್ರ ಬರೆದಿದ್ದಾರೆ.

ಪತ್ರವನ್ನು ಸಿಐಡಿ ಅಧಿಕಾರಿಗಳಿಗೆ ಕಳುಹಿಸಿದ ನೀಲಮಣಿರಾಜು ಅವರು, ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದು, ಕಾಟಾಚಾರದ ತನಿಖೆ ಮುಗಿಸಿದ ಸಿಐಡಿ ಅಧಿಕಾರಿಗಳು ಯಾವುದೇ ವಂಚನೆ ನಡೆದಿಲ್ಲ ಎಂದು ವರದಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಐಎಂಎ ವಂಚನೆಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ತಂದು ತನಿಖೆ ಕೈಗೊಳ್ಳುವಂತೆ ಆದೇಶಿಸಿದ್ದರೂ ಯಾವುದೇ ಕ್ರಮಕೈಗೊಳ್ಳದ ಸಿಐಡಿ ಅಧಿಕಾರಿಗಳ ವಿರುದ್ಧ ಗೃಹ ಸಚಿವ ಎಂ.ಬಿ ಪಾಟೀಲ್ ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್‍ಐಟಿ ವಶಕ್ಕೆ

ಪ್ರಕರಣ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದ 7 ಮಂದಿ ನಿರ್ದೇಶಕರನ್ನು ಬುಧವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವರನ್ನು ತಡರಾತ್ರಿಯೇ ವಶಕ್ಕೆ ತೆಗೆದುಕೊಂಡ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಡಿಐಜಿ ರವಿಕಾಂತೇಗೌಡ ನೇತೃತ್ವದ ಎಸ್‍ಐಟಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಕೂಡಲೇ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕಂಪನಿಯ ಮಾಲೀಕ ಮೊಹ್ಮದ್ ಮನ್ಸೂರ್‍ಖಾನ್ ಎಲ್ಲಿದ್ದಾನೆ? ಆತನ ಕುಟುಂಬ ಸದಸ್ಯರು ಅವನ ಜೊತೆಗಿದ್ದಾರೆಯೇ? ಆತನ ವ್ಯವಹಾರ ಎಲ್ಲೆಲ್ಲಿ ನಡೆಯುತ್ತಿತ್ತು? ಜ್ಯುವೆಲ್ಸ್ , ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ, ಔಷಧಿ ಫಾರ್ಮ ಸೇರಿದಂತೆ ಯಾವ ಯಾವ ಕ್ಷೇತ್ರಗಳಲ್ಲಿ ಹಣ ತೊಡಗಿಸಲಾಗಿದೆ ಎಂಬುದರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಐಟಿ ತನಿಖೆ ಶುರು

ಐಎಂಎ ಕಂಪನಿಯಲ್ಲಿ ಸುಮಾರು 800 ಕೋಟಿಗೂ ಹೆಚ್ಚು ವಂಚನೆಯಾಗಿರುವುದು ದೂರುಗಳಿಂದ ಕಂಡು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿನಿರ್ದೇಶನಾಲಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕಂಪನಿಯಿಂದ ನಡೆದಿರುವ ಹಣಕಾಸು ವ್ಯವಹಾರದ ಮಾಹಿತಿಯನ್ನು ಪಡೆದುಕೊಳ್ಳುತ್ತಿರುವ ಅಧಿಕಾರಿಗಳು ಅವುಗಳ ಪರಿಶೀಲನೆ ನಡೆಸಿದ್ದು, ಆದಾಯ ತೆರಿಗೆ ವಂಚಿಸುವ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

IMA Jewels Mohammad mansoor khan Cheating Police case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ