ಲೋಕಸಭೆಗೆ ಬ್ಯಾಲೆಟ್ ಮೂಲಕ ಚುನಾವಣೆ ನಡೆಸುವಂತೆ ಅರ್ಜಿ

Loksabha Election

13-06-2019

ದೆಹಲಿ: 2019ರ ಲೋಕಸಭೆಗೆ ನಡೆದ ಚುನಾವಣೆಯನ್ನು ರದ್ದುಗೊಳಿಸಿ, ಹೊಸದಾಗಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‍ನಲ್ಲಿ ಹಿರಿಯ ವಕೀಲ ಎಂ ಎಲ್ ಶರ್ಮಾ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಅವರು ಮನವಿ ಮಾಡಿದರು. ಜನಪ್ರತಿನಿಧಿಗಳ ಕಾಯ್ದೆ ಅನ್ವಯ, ಚುನಾವಣೆಯನ್ನು ಕೇವಲ ಬ್ಯಾಲೆಟ್ ಪೇಪರ್ ಮೂಲಕ ಮಾತ್ರ ನಡೆಸಬೇಕು. ಆದ್ದರಿಂದ 2019ರ ಲೋಕಸಭೆಗೆ ನಡೆದ ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಅವರು ಹೇಳಿದರು.

ಶರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ನಡೆಯುವ ಸಾಧ್ಯತೆ ಇದೆ. ಇಂದು ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಇವಿಎಂಗಳ ವೈಜ್ಞಾನಿಕತೆ ಕುರಿತು ಸವಾಲೆಸೆದಿದ್ದು, ಇವಿಎಂಗಳ ಮೂಲಕ ಚುನಾವಣೆ ನಡೆಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಅವರು ಹೇಳಿದರು. ಜನಪ್ರತಿನಿಧಿಗಳ ಕಾಯ್ದೆಯ ಅನ್ವಯ ಕೂಡ ಚುನಾವಣಾ ಆಯೋಗ ಇವಿಎಂ ಮೂಲಕ ಚುನಾವಣೆ ನಡೆಸುವಂತಿಲ್ಲ ಎಂದರು.

ಜೊತೆಗೆ ಇವಿಎಂಗಳ ಮೂಲಕ ಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್‍ನಲ್ಲಿ ಶರ್ಮಾ ಮನವಿ ಮಾಡಿಕೊಂಡಿದ್ದಾರೆ. ಇವಿಎಂಗಳ ವಿಶ್ವಾಸಾರ್ಹತೆಯ ಕುರಿತು ಸದಾ ಅನುಮಾನಗಳು ವ್ಯಕ್ತವಾಗುತ್ತಿವೆ. ಇಂತಹ ಸಮಯದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಪ್ರಕ್ರಿಯೆ ನಡೆಸಬೇಕಾದ ಅಗತ್ಯವಿದೆ ಎಂದರು.

ಕೆಲವು ಚುನಾವಣೆಗಳಲ್ಲಿ ಸೋಲಿನ ನಂತರ ವಿಪಕ್ಷಗಳು ನಿರಂತರವಾಗಿ ಇವಿಎಂಗಳ ವಿರುದ್ಧ ಸವಾಲೆಸೆದಿವೆ. ಮಮತಾ ಬ್ಯಾನರ್ಜಿಯವರು ಕೂಡ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಒತ್ತಾಯಿಸಿದ್ದರು ಎಂದ ಅವರು, ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆಯನ್ನು ಮರಳಿ ಜಾರಿಗೆ ತರಬೇಕು ಎಂದರು.

ಕೇವಲ ಶೇ. 2ರಷ್ಟು ಇವಿಎಂಗಳನ್ನು ಮಾತ್ರ ತಾಳೆ ಮಾಡಲಾಗಿದೆ. ಉಳಿದ ಶೇ. 98ರಷ್ಟನ್ನು ವಿವಿಪ್ಯಾಟ್‍ಗಳ ಮೂಲಕ ತಾಳೆ ಮಾಡಿಲ್ಲ. ಮಮತಾ ಅವರ ಪ್ರಕಾರ, 2019ರ ಲೋಕಸಭೆ ಚುನಾವಣೆಯ ಫಲಿತಾಂಶ ಜನಾದೇಶವಲ್ಲ, ಇವಿಎಂನಿಂದ ಸಿಕ್ಕಿರುವ ಗೆಲುವು. ಒಂದು ಲಕ್ಷ ಇವಿಎಂಗಳು ನಾಪತ್ತೆಯಾಗಿವೆ. ಮತದಾನದ ವೇಳೆ ಇವಿಎಂಗಳನ್ನು ಬದಲಾಯಿಸುವುದು ನಿಷ್ಪಕ್ಷಪಾತ ಮತದಾನಕ್ಕಾಗಿ ಮಾಡಿದ ಯೋಜನೆಯಲ್ಲ. ಅವರು (ಬಿಜೆಪಿ) ಇವಿಎಂಗಳನ್ನು ತಮ್ಮ ಸ್ವಂತ ಪಕ್ಷಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶರ್ಮಾ ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

Loksabha Election EVM Supreme Court PM Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ