ಐಎಂಎ ಜೆವೆಲ್ಸ್ ವಂಚನೆ: ಎಸ್ಐಟಿ ಮುಖ್ಯಸ್ಥರಾಗಿ ರವಿಕಾಂತೇಗೌಡ

IMA Cheating case

12-06-2019

ಬೆಂಗಳೂರು: ನೂರಾರು ಕೋಟಿ ರೂ. ಹೂಡಿಕೆ ಸಂಗ್ರಹಿಸಿ ವಂಚನೆ ನಡೆಸಿರುವ ಐಎಂಎ ಕಂಪನಿ ಪ್ರಕರಣದ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಮುಖ್ಯಸ್ಥರನ್ನಾಗಿ ಅಗ್ನಿಶಾಮಕ ದಳದ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿ) ರವಿಕಾಂತೇಗೌಡ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.

ಡಿಐಜಿ ರವಿಕಾಂತೇಗೌಡ ಅವರ ನೇತೃತ್ವದ ಎಸ್‍ಐಟಿಗೆ ಸಿಸಿಬಿಯ ಡಿಸಿಪಿ ಗಿರೀಶ್, ಎಸಿಪಿ ಬಾಲರಾಜ್, ಸಿಐಡಿಯ ಡಿವೈಎಸ್‍ಪಿ ರವಿಶಂಕರ್ ಗುಪ್ತದಳದ ಡಿವೈಎಸ್‍ಪಿ ರಾಜಾ ಇಮಾಮ್ ಖಾಸಿಂ, ಇನ್ಸ್‍ಪೆಕ್ಟರ್‍ಗಳಾದ ಗೀತಾ, ರಾಜೇಶ್, ಶೇಖರ್, ಅಂಜನ್ ಕುಮಾರ್, ತನ್ವೀರ್ ಅಹಮದ್ ಸೇರಿ 10 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಐಎಂಎ ವಂಚನೆ ಪ್ರಕರಣವನ್ನು ಕೂಡಲೇ ತನಿಖಾ ತಂಡವು ಕೈಗೆತ್ತಿಕೊಂಡು ತನಿಖೆ ನಡೆಸಲು ಸೂಚಿಸಲಾಗಿದ್ದು, ಎಷ್ಟು ದಿನಗಳ ಒಳಗೆ ತನಿಖೆ ಮುಗಿಯಬೇಕು ಎನ್ನುವ ಗಡುವನ್ನು ವಿಧಿಸಿಲ್ಲ. ಈ ನಡುವೆ ಐಎಂಎ ಜ್ಯುವೆಲರ್ಸ್‍ನಿಂದ ವಂಚನೆಗೆ ಒಳಗಾದವರು ಇನ್ನೂ ಸಾಲುಗಟ್ಟಿ ದೂರು ಸಲ್ಲಿಸುತ್ತಿದ್ದು, ನಗರವಲ್ಲದೆ ವಿವಿಧ ಜಿಲ್ಲೆಗಳು, ಹೊರರಾಜ್ಯಗಳಿಂದ ವಂಚನೆಗೊಳಗಾದವರು ಧಾವಿಸಿ, ಪೊಲೀಸರಿಗೆ ದೂರು ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಶಿವಾಜಿನಗರದ ಸಮದ್ ಹೌಸ್ ಸಭಾಂಗಣದಲ್ಲಿ ಸಾಲುಗಟ್ಟಿ ವಂಚನೆಗೊಳಗಾದವರು ಬುಧವಾರ ಕೂಡ ದೂರು ಸಲ್ಲಿಸುತ್ತಿದ್ದು, ಇಲ್ಲಿಯವರೆಗೆ 13 ಸಾವಿರಕ್ಕೂ ಹೆಚ್ಚು ಮಂದಿ ಹೂಡಿಕೆದಾರರು ದೂರು ನೀಡಿದ್ದಾರೆ. ಬುಧವಾರ ಬೆಳಿಗ್ಗೆ ಮತ್ತೆ ದೂರು ಸಲ್ಲಿಕೆ ಮುಂದುವರೆದಿದ್ದು ತಡರಾತ್ರಿಯವರೆಗೆ ದೂರು ಸಲ್ಲಿಸಿದ್ದಾರೆ.

ಈ ನಡುವೆ ಐಎಂಎ ಹಗರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹರಿಬಿಟ್ಟು ಪರಾರಿಯಾಗಿರುವ ಐಎಂಎ ಮಾಲೀಕ ಮಹಮದ್ ಮನ್ಸೂರ್ ಖಾನ್, ಕುಟುಂಬ ಸಮೇತ ದುಬೈಗೆ ಪರಾರಿಯಾಗಿರುವ ವದಂತಿ ಹರಡಿದೆ. ಆದರೆ ಪೊಲೀಸರು ಇದನ್ನು ನಿರಾಕರಿಸಿ ಕರ್ನಾಟಕದ ರಹಸ್ಯ ಸ್ಥಳವೊಂದರಲ್ಲಿ ಆತ ಅಡಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

IMA Jewels Mohammod Mansoor Khan Cheating RavikanteGowda


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ