ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಖೆಡ್ಡಾ

ACB Raid

12-06-2019

ಬೆಂಗಳೂರು : ಬೆಳ್ಳಂಬೆಳಗ್ಗೆ ಮೂವರು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ಬಡಿದಿರುವ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕುಲ ಸಚಿವರಾಗಿದ್ದು, ಈಗ ರಸಾಯನಶಾಸ್ತ್ರದ ಪ್ರೊಫೆಸರ್ ಆಗಿರುವ ಕಲ್ಲಪ್ಪ ಎಂ.ಹೊಸಮನಿ, ಉತ್ತರ ಕನ್ನಡ ಜೊಯ್ಡಾ ಉಪ ವಲಯದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ಉದಯ್ ಡಿ.ಚಬ್ಬಿ ಹಾಗೂ ಮಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ಅಭಿಯಂತರರಾಗಿರುವ ಮಹದೇವಪ್ಪ ಎಸಿಬಿ ಪೊಲೀಸರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು.

ಧಾರವಾಡದ ಶ್ರೀನಗರದಲ್ಲಿರುವ ಪ್ರೊಫೆಸರ್ ಕಲ್ಲಪ್ಪ ಎಂ.ಹೊಸಮನಿ ಅವರ ನಿವಾಸ ಹಾಗೂ ಗುಲಗಂಜಿಕೊಪ್ಪದಲ್ಲಿರುವ ಅವರ ಸಂಬಂಧಿಕರ ನಿವಾಸಗಳ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಪೊಲೀಸರು ದಾಳಿ ನಡೆಸಿ ಸಂಪಾದನೆಗಿಂತ ಹೆಚ್ಚು ಆಸ್ತಿ ಹೊಂದಿರುವ ದಾಖಲೆಗಳನ್ನು ವಶಪಡಿಸಿಕೊಂಡು ಶೋಧ ಮುಂದುವರಿಸಿದ್ದಾರೆ.

ಬೆಳಗಾವಿಯಲ್ಲಿರುವ ಉದಯ್ ಡಿ.ಚಬ್ಬಿ ಅವರ ನಿವಾಸ ಹಾಗೂ ದಾಂಡೇಲಿಯಲ್ಲಿರುವ ಎರಡು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ಅಭಿಯಂತರರಾಗಿರುವ ಮಹದೇವಪ್ಪ ಅವರ ಬೆಂಗಳೂರಿನ ಸಿದ್ದೇಹಳ್ಳಿಯಲ್ಲಿರುವ ನಿವಾಸ, ಮಂಗಳೂರಿನ ಕದ್ರಿಪಾಡೆಯಲ್ಲಿರುವ ನಿವಾಸ ಹಾಗೂ ಚಿತ್ರದುರ್ಗದ ಕಣಿವೆ ಹಳ್ಳಿಯಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ಮುಂದುವರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ACB Dharwad Corruption Dandeli


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ