ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ವಿದೇಶಕ್ಕೆ ಪರಾರಿ..?

IMA Jewels founder goes missing

11-06-2019

ಬೆಂಗಳೂರು: ಸಾರ್ವಜನಿಕರಿಂದ ಸುಮಾರು 500 ಕೋಟಿ ರೂ. ಗಳಷ್ಟು ಹಣ ಹೂಡಿಕೆ ಮಾಡಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಹರಿಬಿಟ್ಟು ಪರಾರಿಯಾಗಿರುವ ಐಎಂಎ ಜ್ಯುವೆಲರ್ಸ್ ಮಾಲೀಕ ಮಹಮದ್ ಮನ್ಸೂರ್ ಖಾನ್ ಪತ್ತೆಗಾಗಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಹರಿಬಿಟ್ಟು ನಿನ್ನೆ ಮುಂಜಾನೆಯಿಂದ ಪರಾರಿಯಾಗಿರುವ ಮನ್ಸೂರ್  ಪತ್ತೆ ಮಾಡಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಜಯನಗರ ಹಾಗೂ ಶಿವಾಜಿನಗರದಲ್ಲಿದ್ದ ಮನೆಗಳಿಗೆ ಬೀಗ ಹಾಕಿ ಮನ್ಸೂರ್ ಖಾನ್, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದು, ಇಲ್ಲಿಯವರೆಗೆ ಆತನ ಸುಳಿವು ಸಿಕ್ಕಿಲ್ಲ.

ಮನ್ಸೂರ್ ಪತ್ತೆಗಾಗಿ ರಚಿಸಿರುವ ಐದು ವಿಶೇಷ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು, ಮೊಬೈಲ್ ಸಂಖ್ಯೆಗಳು, ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆತನ ಸಂಬಂಧಿಕರು, ಸ್ನೇಹಿತರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮನ್ಸೂರ್ ನಡೆಸುತ್ತಿದ್ದ ಶೈಕ್ಷಣಿಕ ಸಂಸ್ಥೆಗಳಿಗೂ ಬೀಗ ಹಾಕಲಾಗಿದೆ. ಕುಟುಂಬದೊಂದಿಗೆ ವಿದೇಶಕ್ಕೆ ಹಾರಿರುವ ಸಾಧ್ಯತೆಗಳಿದ್ದು, ವಿಮಾನ ನಿಲ್ದಾಣಗಳಲ್ಲೂ ಹದ್ದಿನ ಕಣ್ಣಿಡಲಾಗಿದೆ. ಇಲ್ಲಿಯವರೆಗೂ ಆತ್ಮಹತ್ಯೆ ಮಾಡಿಕೊಂಡಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಐಎಂಎ ಜ್ಯುವೆಲರ್ಸ್‍ನಲ್ಲಿ ಹಣ ಹೂಡಿಕೆ ಮಾಡಿರುವ ಸುಮಾರು 4 ಸಾವಿರ ಮಂದಿ ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮಧ್ಯೆ ಐಎಂಎ ಜ್ಯುವೆಲರ್ಸ್‍ನ ಬೌರಿಂಗ್ ಆಸ್ಪತ್ರೆಯ ಮುಂಭಾಗದ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿರುವ ಹೂಡಿಕೆದಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಲು ಮುಂದಾಗಿದ್ದಾರೆ. ವಂಚನೆಗೊಳಗಾದವರು ನೀಡುತ್ತಿರುವ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ಧೈರ್ಯ ಹೇಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.  ನಗರ ಮಾತ್ರವಲ್ಲದೆ, ವಿವಿಧೆಡೆಗಳಲ್ಲಿನ ಸಾರ್ವಜನಿಕರು, ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದು, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸುತ್ತಿದ್ದಾರೆ. ಅವುಗಳನ್ನು ಸ್ವೀಕರಿಸಿ ಧೈರ್ಯ ತುಂಬಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಎಂಎ ಜ್ಯೂವೆಲರ್ಸ್ ಮಳಿಗೆಯಲ್ಲಿ ಚಿನ್ನಾಭರಣ ಕೊಳ್ಳುವವರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಇದರಿಂದಾಗಿ ಮಳಿಗೆಯಲ್ಲಿ ಚಿನ್ನಾಭರಣ ಕೊಳ್ಳಲು ಜನ ಮುಗಿಬೀಳುತ್ತಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸುವ ಸ್ಥಿತಿ ಉಂಟಾಗುತ್ತಿತ್ತು.

ಜಯನಗರ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಚಿನ್ನಾಭರಣ ಹೊಂದಿದ್ದ ಐಎಂಎ ಮಾಲೀಕ ಮನ್ಸೂರ್ ಬಹುಬೇಗ ಜನರಲ್ಲಿ ವಿಶ್ವಾಸ ಗಳಿಸಿದ್ದ. ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂದು ಹೇಳಿದ್ದರಿಂದ ಆತನನ್ನು ನಂಬಿ ಸಾಕಷ್ಟು ಮಂದಿ ಹಣ ಹೂಡುತ್ತಿದ್ದರು.

ಹಣ ಹೂಡಿಕೆ ಮಾಡಿದವರಿಗೆ ಬಾಂಡ್ ನೀಡಿ ಪ್ರತಿ ತಿಂಗಳು ಗ್ರಾಹಕರಿಗೆ ಬ್ಯಾಂಕ್ ಮೂಲಕವೇ ಸಾವಿರಾರು ರೂ. ಗಳ ಲಾಭಾಂಶವನ್ನು ಪಾವತಿಸಲಾಗುತ್ತಿತ್ತು. ಪ್ರತಿಯೊಂದಕ್ಕೂ ರಶೀದಿ ನೀಡಲಾಗುತ್ತಿದ್ದು, ಬ್ಯಾಂಕ್‍ನ ದಾಖಲೆಗಳಿದ್ದು, ಅದನ್ನು ಆಧರಿಸಿ ಹೂಡಿಕೆ ಮಾಡಿದವರಿಗೆ ನ್ಯಾಯ ಒದಗಿಸಲು ಪೊಲೀಸರಿಗೆ ಸಹಾಯವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಮನ್ಸೂರ್ ಸೇಫ್

ಐಎಂಎ ಮಾಲೀಕ ಮನ್ಸೂರ್ ಅವರಿಗೆ ಏನು ಆಗಿಲ್ಲ ಎಂದು ಜ್ಯುವೆಲ್ಲರಿಯ ಸೇಲ್ಸ್ ಅಸೋಶಿಯೇಟ್ ಮಹಮ್ಮದ್ ಶಾಬಾದ್ ತಿಳಿಸಿದ್ದಾರೆ. ಮಾನ್ಸೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವದಂತಿ ಬಗ್ಗೆ ಮಾಹಿತಿ ಮಹಮ್ಮದ್ ಶಾಬಾದ್ ನಮ್ಮ ಎಂಡಿ ಸೇಫ್ ಆಗಿದ್ದಾರೆ. ಅವರಿಗೆ ಏನು ಆಗಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಸುಳ್ಳು ಎಂದು ಹೇಳಿದ್ದಾರೆ.

ಈ ನಡುವೆ ಶಾಬಾದ್ ಯುಎಇಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡತೊಡಗಿದೆ. ಕಂಪನಿ ವಿರುದ್ಧ ಗ್ರಾಹಕರು ತಿರುಗಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಜೂನ್ 8 ಶನಿವಾರ ಸಂಜೆಯೇ ಯುಎಇಗೆ ಶಾಬಾದ್ ಪರಾರಿಯಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.


ಸಂಬಂಧಿತ ಟ್ಯಾಗ್ಗಳು

IMA Jewels Police Mohammad Mansoor Khan Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ