ಜಿಂದಾಲ್ ಗೆ ಭೂಮಿ - ಸರ್ಕಾರ ಯೂ ಟರ್ನ್

Jindal

11-06-2019

ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಉಕ್ಕು ಮತ್ತು ಕಬ್ಬಿಣದ ಕಂಪನಿಗೆ ನೀಡಲಾಗಿದ್ದ ಜಮೀನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕಳೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಕೂಡಲೇ ವಾಪಸ್ ಪಡೆಯುವಂತೆ ಖುದ್ದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರ ಜಮೀನು ನೀಡುವ ನಿರ್ಧಾರವನ್ನು ಕೈ ಬಿಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲು ಮುಂದಾಗಿತ್ತು. ಅಲ್ಲದೆ ಸರ್ಕಾರದ ಈ ತೀರ್ಮಾನಕ್ಕೆ ರೈತ ಸಂಘಟನೆಗಳು, ವಿವಿಧ ಸಾಮಾಜಿಕ ಹೋರಾಟಗಾರರು ಕೂಡಾ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರ ವಾಪಸ್ ಪಡೆಯಲು ಮುಂದಾಗಿದೆ.

ಒಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೇಕುಪ್ಪ ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಗೆ 2000.58 ಎಕರೆ ಹಾಗೂ ಯರಬನಹಳ್ಳಿ ಗ್ರಾಮದ 1666.73 ಎಕರೆ ಸೇರಿ 3667 ಎಕರೆ ಜಮೀನನ್ನು ಗುತ್ತಿಗೆಯಿಂದ ಕ್ರಯಕ್ಕೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಕಳೆದ ಮೇ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿಯ ತೋರಣಗಲ್ಲು ಹಾಗೂ ಕುರೆಕುಪ್ಪ ಗ್ರಾಮಗಳಲ್ಲಿನ 2000 ಎಕರೆ ಹಾಗೂ ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿಯ1666.73 ಎಕರೆ ಜಮೀನನ್ನು 2006 ಮತ್ತು 2007 ರಲ್ಲಿ ಗುತ್ತಿಗೆ ಮತ್ತು ಮಾರಾಟದ ಆಧಾರದ ಮೇಲೆ ಸರ್ಕಾರ ಜಿಂದಾಲ್ ಸ್ಟೀಲ್ ಕಂಪನಿಗೆ ನೀಡಿತ್ತು.

ಗುತ್ತಿಗೆ ಅವಧಿ ಮುಗಿದ ಹಿನ್ನಲೆಯಲ್ಲಿ ಎರಡು ಒಪ್ಪಂದಗಳಂತೆ 3667 ಎಕರೆ ಜಮೀನನ್ನು ಜಿಂದಾಲ್ ಸ್ಟೀಲ್ ಕಂಪನಿಗೆ ಪರಭಾರೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು

ಸಚಿವ ಸಂಪುಟ ತೀರ್ಮಾನದ ಬಳಿಕ ಮಾಜಿ ಸಚಿವ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಪತ್ರ ಬರೆದು ಜಿಂದಾಲ್ ಸಂಸ್ಥೆ ಸರ್ಕಾರದ ಅಧೀನ ಸಂಸ್ಥೆಯಾದ ಎಂಎಂಎಲ್ ಗೆ 2000 ಕೋಟಿ ರೂ ಬಾಕಿ ಪಾವತಿಸಬೇಕಿದೆ ಹಾಗೂ ಸಂಸ್ಥೆಯ ಮೇಲೆ ಲೋಕಾಯುಕ್ತ ಅಕ್ರಮ ಗಣಿಗಾರಿಕೆ ವರದಿಯ 23ನೇ ಅಧ್ಯಾಯದಲ್ಲಿ ಲಕ್ಷಾಂತರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಸಾಗಾಣಿಕೆ ಮಾಡಿರುವ ಆರೋಪ ಹೊರಿಸಲಾಗಿದ್ದು, ಈ ಪ್ರಕರಣ ತಾರ್ಕಿಕ ಅಂತ್ಯವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಅಲ್ಲದೆ ಬಿಜೆಪಿ ಸಂಸದರು, ಶಾಸಕರು ವಿಧಾನ ಪರಿಷತ್ ಸದಸ್ಯರು ಜೂನ್ 14 ರಿಂದ 16 ರವರಗೆ ಮೂರು ದಿನ ಅಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇದು ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರದ ನಿಲುವು ಬದಲಾಗಿದೆ..


ಸಂಬಂಧಿತ ಟ್ಯಾಗ್ಗಳು

Jindal Bellari Government Land


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ