ಬಿಜೆಪಿ ಮಾಡಿದ ಸಾಲವನ್ನು ನಾವು ತೀರಿಸುತ್ತಿದ್ದೇವೆ !

Kannada News

08-06-2017

ಬೆಂಗಳೂರು:- ನಂಜನಗೂಡು, ಗುಂಡ್ಲುಪೇಟೆ, ಉಪಚುನಾವಣೆಗಳು ಮುಂದಿನ ವಿಧಾನಸಭೆಯ ದಿಕ್ಸೂಚಿ ಎಂದು ಹೇಳುತ್ತಲೇ ಬಿಜೆಪಿಯವರು ತಾವೇ ದಿಕ್ಕು ತಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ನಲ್ಲಿ ವ್ಯಂಗ್ಯವಾಡಿದರು. ರಾಜ್ಯದಲ್ಲಿ ಎದುರಾಗಿರುವ ಬರ ಕುರಿತಂತೆ ನಿಯಮ 59ರಡಿ ಪೂರ್ವಭಾವಿಯಾಗಿ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಪ್ರಸ್ತಾಪಿಸುವ ವೇಳೆ ಚರ್ಚೆ ರಾಜಕೀಯಕ್ಕೆ ರೂಪಾಂತರಗೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗಳು ದಿಕ್ಸೂಚಿ ಎಂದು ಬಿಜೆಪಿ ನಾಯಕರು ಚುನಾವಣೆಯಲ್ಲಿ ದೊಡ್ಡ ಮಟ್ಟದ ಪ್ರಚಾರ ಮಾಡಿದರು. ಆದರೆ ಆ ದಿಕ್ಸೂಚಿ ಏನಾಯಿತು ಎಂದು ಈಶ್ವರಪ್ಪ ಅವರನ್ನು ಪ್ರಶ್ನಿಸಿದರು. ಆಗ ಸುಮ್ಮನಿರದ ಈಶ್ವರಪ್ಪ ಹೆಬ್ಬಾಳ ವಿಧಾನಸಭಾ ಉಪಚುನಾವಣೆ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ ಎಂದು ತಿರುಗೇಟು ನೀಡಿದರು. ಮೊದಲು ರೈತರ ಸಾಲವನ್ನು ಮನ್ನಾ ಮಾಡಿ ಎಂಬ ಈಶ್ವರಪ್ಪ ಅವರ ಒತ್ತಾಯಕ್ಕೆ ಹಿಂದೆ ನೀವು ಮಾಡಿದ (ಬಿಜೆಪಿ) ಸಾಲವನ್ನು ನಾವು (ಕಾಂಗ್ರೆಸ್) ತೀರಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಆಗ ಈಶ್ವರಪ್ಪ ನೀವೂ ಸಾಲ ಮಾಡಿ, ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ನೀವು ಮಾಡಿದ ಸಾಲವನ್ನು ನಾವು ತೀರಿಸುತ್ತೇವೆ ಎಂದು ಹೇಳಿದರು. ನೀವು ಅಧಿಕಾರಕ್ಕೆ ಬಂದರೆ ತಾನೆ ಸಾಲವನ್ನು ತೀರಿಸುವುದು. ಮುಂದೆ ಅಧಿಕಾರಕ್ಕೆ ಬರುವುದು ಕಾಂಗ್ರೆಸ್ ಸರ್ಕಾರವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ