ಕುಖ್ಯಾತ ರೌಡಿ ಪ್ರಕಾಶ್ ಅಲಿಯಾಸ್ ಕಾಶಿ ಕೊಚ್ಚಿ ಕೊಲೆ

Murder in Bangalore

04-06-2019

ಬೆಂಗಳೂರು : ಸ್ನೇಹಿತನೊಂದಿಗೆ ಬೈಕ್‍ನಲ್ಲಿ ಹೋಗುತ್ತಿದ್ದ ಕುಖ್ಯಾತ ರೌಡಿ ಪ್ರಕಾಶ್ ಅಲಿಯಾಸ್ ಕಾಶಿಯನ್ನು ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಲಸೂರಿನ ಮರ್ಫಿ ಟೌನ್‍ನ ರೌಡಿ ಕಾಶಿ (28) ಸೋಮವಾರ ರಾತ್ರಿ 7.50ರ ವೇಳೆ ಸ್ನೇಹಿತ ರಂಜಿತ್‍ನ ಬೈಕ್‍ನಲ್ಲಿ ಹಿಂದೆ ಕುಳಿತು ಹಳೆಮದ್ರಾಸ್ ರಸ್ತೆಯ ತಾಮರೈ ಕಣ್ಣನ್ ರಸ್ತೆ ಬಳಿ ಹೋಗುತ್ತಿದ್ದಾಗ ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಕಾಶಿಯ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಜೊತೆಯಲ್ಲಿದ್ದ ರಂಜಿತ್ ಅಸಹಾಯಕನಾಗಿ ನಿಂತಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಾಶಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಹಲಸೂರಿನ ರೌಡಿಪಟ್ಟಿಯಲ್ಲಿದ್ದ ಕಾಶಿ ಕೊಲೆಯತ್ನ, ಸುಲಿಗೆ, ಬೆದರಿಕೆ, ಇನ್ನಿತರ 6ಕ್ಕೂ ಹೆಚ್ಚು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕೆಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ನಂತರವೂ ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದ.

ಸ್ನೇಹಿತರ ಜೊತೆ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ ಕಾಶಿಯನ್ನು ಹಳೆದ್ವೇಷದ ಹಿನ್ನೆಲೆಯಲ್ಲಿ ಲಾರೆನ್ಸ್ ರಾಜ್, ಅಭಿ ಸೇರಿ ನಾಲ್ವರು ಕೊಚ್ಚಿಕೊಲೆಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿರುವ ಹಲಸೂರು ಪೊಲೀಸ್, ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Robbery Rowdy Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ