ಕುಖ್ಯಾತ ರೌಡಿ ಶಶಾಂಕ್ ಬಂಧನ

Rowdy Shashank arrested

04-06-2019

ಬೆಂಗಳೂರು : ಗ್ಯಾಂಗ್ ಕಟ್ಟಿಕೊಂಡು ಬೈಕ್‍ನಲ್ಲಿ ಸಂಚರಿಸುತ್ತಾ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ಬೆದರಿಸಿ ಹಲ್ಲೆ ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶಶಾಂಕ್‍ಗೆ ಮೊಣಗಾಲಿಗೆ ಗುಂಡು ಹೊಡೆದು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ಬನಶಂಕರಿಯ ಶಶಾಂಕ್ (24) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಂಧಿಸಲು ಹೋದಾಗ ಶಶಾಂಕ್ ರೇಸರ್‍ನಿಂದ ನಡೆಸಿದ ಹಲ್ಲೆಯಿಂದ ಭುಜಕ್ಕೆ ಪೇದೆ ಪ್ರಕಾಶ್ ಗಾಯಗೊಂಡಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಮೇ 13 ಟೆಕ್ಕಿ ಯೊಬ್ಬರ ಮೇಲೆ ಹಲ್ಲೆ ಮಾಡಿ ಹಣ ಮೊಬೈಲ್ ದೋಚಿ ತಲೆಮರೆಸಿಕೊಂಡಿದ್ದ ಶಶಾಂಕ್, ಸ್ಕೂಟರ್‍ನಲ್ಲಿ ಅತ್ತಿಬೆಲೆಯ ಟಿವಿಎಸ್ ರಸ್ತೆಯಲ್ಲಿ ಸೋಮವಾರ ರಾತ್ರಿ 11.50ರ ಸುಮಾರಿನಲ್ಲಿ ಹೋಗುತ್ತಿದ್ದ. ಈ ವೇಳೆ ನಾಕಾಬಂಧಿ ಮಾಡುತ್ತಿದ್ದ ಅತ್ತಿಬೆಲೆ ಸರ್ಕಲ್ ಇನ್ಸ್‍ಪೆಕ್ಟರ್ ಬಾಲಾಜಿ, ಮತ್ತವರ ಸಿಬ್ಬಂದಿ, ಶಶಾಂಕ್‍ನ ಸ್ಕೂಟರ್ ಅಡ್ಡಗಟ್ಟಿ ತಪಾಸಣೆಗೆ ಮುಂದಾದಾಗ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೇದೆ ಪ್ರಕಾಶ್‍ಗೆ ರೇಜರ್‍ನಿಂದ ಎಡಭುಜಕ್ಕೆ ಹೊಡೆದು ಹಲ್ಲೆ ನಡೆಸಿದ್ದಾನೆ.

ಕೂಡಲೇ ಬಾಲಾಜಿ ಅವರು, ಪೊಲೀಸರ ಮೇಲೆ ಕೈಮಾಡುವುದನ್ನು ನಿಲ್ಲಿಸಿ ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಗುಂಡು ಹಾರಿಸಿದ್ದು, ಅದು ಬಲಗಾಲಿನ ಮೊಣಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.

ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಶಾಂಕ್ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಗ್ರಾಮಾಂತರ ಎಸ್ಪಿ ಡಾ. ರಾಮ್ ನಿವಾಸ್ ಸೆಪೆಟ್ ತಿಳಿಸಿದ್ದಾರೆ.

ಟೆಕ್ಕಿಸುಲಿಗೆ

ಗುಂಡೇಟು ತಗುಲಿರುವ ಶಶಾಂಕ್ ತನ್ನ ಗ್ಯಾಂಗ್‍ನಲ್ಲಿದ್ದ ರಾಖಿ, ರೇವಂತ್ ಹಾಗೂ ಸಲ್ಮಾನ್‍ನೊಂದಿಗೆ ಕಳೆದ ಮೇ 13ರ ರಾತ್ರಿ 11.45ರ ವೇಳೆ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದ ಕಿನ್ ಕಾರ್ ಕುಮಾರ್ ಠಾಕೂರ್ (34) ಅವರು ಕೆಲಸ ಮುಗಿಸಿಕೊಂಡು ಮೇಡಹಳ್ಳಿಯ ಶುಭ ಅಪಾರ್ಟ್‍ಮೆಂಟ್‍ನಲ್ಲಿನ ತನ್ನ ಮನೆಗೆ ಅತ್ತಿಬೆಲೆಯ ಟಿವಿಎಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಬೈಕ್‍ಗಳಲ್ಲಿ ಬಂದು ಅಡ್ಡಗಟ್ಟಿದ್ದರು.

ಸುಲಿಗೆ ಮಾಡಲು ಮುಂದಾದಾಗ ಪ್ರತಿರೋಧ ತೋರಿದ ಕುಮಾರ್ ಮುಖ ಹಾಗೂ ಬೆನ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ, ನಾಲ್ಕೂವರೆ ಸಾವಿರ ರೂ. ನಗದು, ಮೊಬೈಲ್, ಚಿನ್ನದ ಸರ, ಉಂಗುರ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಅತ್ತಿಬೆಲೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಶಶಾಂಕ್‍ಗೆ ಗುಂಡು ಹೊಡೆದು ಬಂಧಿಸಿದ್ದು, ಗ್ಯಾಂಗ್‍ನಲ್ಲಿದ್ದ ರಾಖಿ, ರೇವಂತ್ ಹಾಗೂ ಸಲ್ಮಾನ್‍ನ ಸುಳಿವು ಪತ್ತೆಯಾಗಿದ್ದು ಅವರ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery Crime Rowdy Gang Arrest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ